ಬೆಳಗಾವಿ,ಅ.16- ರಾಜ್ಯದಲ್ಲಿ ಈ ಬಾರಿ ಭೀಕರ ಪ್ರವಾಹ ಉಂಟಾಗಿ ಸಂತ್ರಸ್ತರಿಗೆ ದೊಡ್ಡ ಪ್ರಮಾಣದಲ್ಲಿ ಪರಿಹಾರ ಕಾರ್ಯ ಕೈಗೊಳ್ಳಬೇಕಾದ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ರೈತರ ಸಾಲ ಮನ್ನಾ ಮಾಡುವುದಿಲ್ಲ ಎಂದು ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ದೊಡ್ಡ ಪ್ರಮಾಣದಲ್ಲಿ ಪ್ರವಾಹ ಉಂಟಾಗಿ ಸಾವಿರಾರು ಜನರು ಮನೆ, ಮಠ, ಆಸ್ತಿಪಾಸ್ತಿ ಎಲ್ಲವನ್ನೂ ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ. ಅವರೆಲ್ಲರಿಗೂ ಹೊಸ ಬದುಕು ಕಟ್ಟಿಕೊಡಬೇಕು. ಇದಕ್ಕಾಗಿ ದೊಡ್ಡ ಪ್ರಮಾಣದ ಹಣಕಾಸು ಬೇಕು. ಹೀಗಾಗಿ ಎಂದು ಪುನರುಚ್ಚರಿಸಿದರು.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರ ನಡೆಸಲು ಆಗಮಿಸಿದ್ದ ಅವರು, ಇಲ್ಲಿನ ಸರ್ಕಿಟ್ ಹೌಸ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರದ ಅವಧಿಯಲ್ಲಿ ಮಾಡಲಾಗಿರುವ ಸಾಲಮನ್ನಾವನ್ನು ಮುಂದುವರೆಸಲಾಗುವುದು. ನಮ್ಮ ಬಳಿ ಹೊಸದಾಗಿ ಸಾಲಮನ್ನಾ ಮಾಡುವ ಯೋಜನೆ ಇಲ್ಲ ಎಂದು ಹೇಳಿದರು.
ಪ್ರವಾಹ ಪೀಡಿತರಿಗೆ ಪರಿಹಾರ ಕಲ್ಪಿಸಲು ಸರ್ಕಾರದ ಬೇರೆ ಬೇರೆ ಯೋಜನೆಗಳ ಹಣವನ್ನು ಬಳಸುತ್ತಿದ್ದೇವೆ. ಸಾಲಮನ್ನಾದಿಂದ ನಮಗೆ ದೊಡ್ಡ ಹೊರೆಯಾಗಿದೆ. ಅದನ್ನು ಮುಂದುವರೆಸಲು ನಾವೇ ಹರಸಾಹಸ ಮಾಡುತ್ತಿದ್ದೇವೆ. ಇನ್ನು ಹೊಸದಾಗಿ ಸಾಲ ಮನ್ನಾ ಮಾಡುವ ಯೋಜನೆ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು.
ದೇಶದಲ್ಲೇ ಮೊದಲ ಬಾರಿಗೆ ನಮಗೆ ಬಹುದೊಡ್ಡ ಸವಾಲು ಎದುರಾಗಿದೆ. ಇರುವ ಆರ್ಥಿಕ ಇತಿಮಿತಿಯೊಳಗೆ ಎಲ್ಲವನ್ನೂ ಸರಿದೂಗಿಸಬೇಕು. ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ 5 ಲಕ್ಷ ಪರಿಹಾರ ನೀಡಿದ್ದೇವೆ. ಈಗಾಗಲೇ ತಳಪಾಯ ಹಾಕಲು ಒಂದು ಲಕ್ಷ ನೀಡಲಾಗಿದೆ.
ಯೋಗ್ಯಕ್ಕೆ ವಾಸವಲ್ಲದ ಬಿ ಕೆಟಗರಿ ಮನೆಗಳಿಗೂ ಅಷ್ಟೇ ಪ್ರಮಾಣದ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ. ಸಮಾರೋಪಾದಿಯಲ್ಲಿ ಪರಿಹಾರ ಕಾರ್ಯವನ್ನು ಕೈಗೊಂಡಿದ್ದೇವೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ನಮಗೆ ಎಲ್ಲ ರೀತಿಯ ನೆರವು ನೀಡುತ್ತಿದೆ. ತಾಂತ್ರಿಕ ಕಾರಣಗಳಿಂದ ಪರಿಹಾರ ಬಿಡುಗಡೆಯಾಗಲು ವಿಳಂಬವಾಗಿದೆ. ಪ್ರತಿಪಕ್ಷಗಳು ಅನಗತ್ಯವಾಗಿ ಗೊಂದಲ ಸೃಷ್ಟಿಸುವ ಕೆಲಸ ಮಾಡಬಾರದು. ಮೊಸರಲ್ಲಿ ಕಲ್ಲು ಹುಡುಕುವ ನಿಮ್ಮ ಪ್ರಯತ್ನ ನಡೆಯುವುದಿಲ್ಲ ಎಂದು ತಿರುಗೇಟು ನೀಡಿದರು.
ಜಲವಿವಾದ ಕುರಿತಂತೆ ಅನ್ಯರಾಜ್ಯಗಳ ಜೊತೆ ಸೌಹಾರ್ದಯುತವಾಗಿ ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಲಾಗುವುದು. ನೆಲಜಲ ಭಾಷೆ ವಿಷಯದಲ್ಲಿ ನಾವು ರಾಜೀಯಾಗುವ ಪ್ರಶ್ನೆಯೇ ಇಲ್ಲ. ಕಾನೂನಿನ ಚೌಕಟ್ಟಿನೊಳಗೆ ಕೆಲವು ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ಮುಂದುವರೆದಿದೆ ಎಂದರು.