ಹಾಸನ: ನಗರದ ಶಕ್ತಿ ದೇವತೆ, ಗ್ರಾಮದೇವತೆ ಐತಿಹಾಸಿಕ ಹಾಸನಾಂಬ ದರ್ಶನಕ್ಕೆ ಕ್ಷಣಗಣನೆ ಶುರುವಾಗಿದೆ. ನಾಳೆ ಆಶ್ವೀಜ ಮಾಸದ ಮೊದಲ ಗುರುವಾರ ಹಾಸನಾಂಬ ದೇಗುಲದ ಬಾಗಿಲು ತೆರೆಯಲಾಗುತ್ತದೆ. ವರ್ಷಕ್ಕೊಮ್ಮೆ ಹಾಸನಾಂಬ ದೇಗುಲದ ಬಾಗಿಲು ತೆರೆಯಲಾಗುತ್ತದೆ. ಅ.17ರಿಂದ 29ರವರೆಗೆ ಹಾಸನಾಂಬ ದೇವಿ ದರ್ಶನ ನೀಡಲಿದ್ದಾಳೆ.
ಈ ಬಾರಿ 13 ದಿನಗಳ ಕಾಲ ಹಾಸನಾಂಬ ದರ್ಶನ ಇರಲಿದೆ. ಆದರೆ ಮೊದಲ ಮತ್ತು ಕೊನೆಯ ದಿನ ಭಕ್ತಿರಿಗೆ ದೇವಿಯ ದರ್ಶನ ಇರುವುದಿಲ್ಲ. ನಾಳೆ ಮಧ್ಯಾಹ್ನ 12.30ಕ್ಕೆ ಗರ್ಭಗುಡಿ ಬಾಗಿಲು ತೆರೆಯಲಾಗುತ್ತದೆ. ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆಯ ಆಶೀರ್ವಾದ ಪಡೆಯಲು ಜನರು ಸಾಗರೋಪಾದಿಯಲ್ಲಿ ಆಗಮಿಸುತ್ತಾರೆ. ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೇ, ಅನೇಕ ರಾಜ್ಯಗಳಿಂದ ಭಕ್ತರು ಹಾಸನಾಂಬ ದೇವಿಯ ದರ್ಶನ ಪಡೆಯಲು ಬರುತ್ತಾರೆ.
ಪ್ರತಿದಿನ ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಹಾಗೂ 3.30 ರಿಂದ ಮುಕ್ತಾಯದವರೆಗೂ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. 300 ರೂ. ಹಾಗೂ 1000 ರೂಪಾಯಿಗಳ ಟಿಕೆಟ್ ಸೌಲಭ್ಯದ ಮೂಲಕ ಶೀಘ್ರ ದರ್ಶನಕ್ಕೂ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ. ಭಕ್ತರಿಗೆ ಅಗತ್ಯವಿರುವ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಜಿಲ್ಲಾಡಳಿತ ಕಲ್ಪಿಸಿದೆ.
ದೇವಾಲಯದ ಒಳಗೆ ಹಾಗೂ ಸುತ್ತಮುತ್ತ ಸಿಸಿ ಟಿವಿ ಕಣ್ಗಾವಲು ಇದೆ. ದೇವಿಯ ಸುಗಮ ದರ್ಶನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಹಾಸನ ನಗರ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಹಾಸನ ನಗರದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಹಾಸನಾಂಬ ದೇವಿ ವರ್ಷಕ್ಕೊಮ್ಮೆ ಮಾತ್ರ ದರ್ಶನ ಭಾಗ್ಯ ಕರುಣಿಸುತ್ತಾಳೆ.
ಅ.17 ರಿಂದ ಹಾಸನಾಂಬ ಜಾತ್ರಾ ಮಹೋತ್ಸವ ಪ್ರಾರಂಭವಾಗುವ ಹಿನ್ನೆಲೆ, ಭಕ್ತರ ಅನುಕೂಲಕ್ಕಾಗಿ ಹಾಸನಾಂಬ ವೆಬ್ಸೈಟ್ ಬಿಡುಗಡೆ ಮಾಡಲಾಗಿದೆ. ಹಾಸನ ಜಿಲ್ಲಾಡಳಿತ ಈ ವೆಬ್ಸೈಟ್ ಬಿಡುಗಡೆ ಮಾಡಿದ್ದು, ಕನ್ನಡ, ಇಂಗ್ಲಿಷ್ ಭಾಷೆಯಲ್ಲಿ ಭಕ್ತರಿಗೆ ಮಾಹಿತಿ ನೀಡಲಿದೆ. ಜಿಲ್ಲೆಯ ಪ್ರವಾಸಿ ತಾಣಗಳ ಜೊತೆಗೆ ಹಾಸನಾಂಬ ದರ್ಶನದ ಬಗ್ಗೆ ವೆಬ್ ಸೈಟ್ ಮಾಹಿತಿ ನೀಡುತ್ತದೆ. ದರ್ಶನದ ಟಿಕೆಟ್ ಸೇರಿದಂತೆ ಎಲ್ಲಾ ಕ್ಷಣ ಕ್ಷಣದ ಮಾಹಿತಿ ಸೈಟ್ ನಲ್ಲಿ ಲಭ್ಯವಾಗಲಿದೆ.