ಸಕಾಲ ಯೋಜನೆಗಳ ಅನುಷ್ಠಾನ-ಕೊನೆಯ ಸ್ಥಾನದಲ್ಲಿರುವ ಬೆಂಗಳೂರು ನಗರ ಜಿಲ್ಲೆ

ಬೆಂಗಳೂರು, ಅ.14-ಸಕಾಲ ಯೋಜನೆಗಳ ಅನುಷ್ಠಾನದಲ್ಲಿ ಬೆಂಗಳೂರು ನಗರ ಜಿಲ್ಲೆ ಇಡೀ ರಾಜ್ಯದಲ್ಲೇ ಕೊನೆಯ ಸ್ಥಾನದಲ್ಲಿದ್ದು,  ನಿರಾಶಾದಾಯಕ ಪ್ರಗತಿಯಾಗಿದೆ ಎಂದು ಸಕಾಲ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರು ನಗರ ಜಿಲ್ಲೆಗೆ ಸಂಬಂಧಿಸಿದ ಸಂಸ್ಥೆಗಳ ಸಕಾಲ ಸೇವೆ ಅನುಷ್ಠಾನ ಪ್ರಗತಿ ಪರಿಶೀಲನೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 30ನೇ ಸ್ಥಾನದಲ್ಲಿರುವ ನಗರ ಜಿಲ್ಲೆಯು  ನವಂಬರ್ ತಿಂಗಳಿನಲ್ಲಿ ರಾಜ್ಯದಲ್ಲಿಯೇ 10ನೇ ಸ್ಥಾನದೊಳಗೆ ಬರುವಂತೆ ಸೂಚನೆ ನೀಡಲಾಗಿದೆ ಎಂದರು.

ಇಂದು ನಗರ ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್, ಉಪತಹಶೀಲ್ದಾರ್ ಒಳಗೊಂಡಂತೆ ಬೆಂಗಳೂರಿಗೆ ಸಂಬಂಧಿಸಿದ ಸಂಸ್ಥೆಗಳ ಅಧಿಕಾರಿಗಳ ಸಭೆ ನಡೆಸಿ ಈ ಸೂಚನೆ ನೀಡಲಾಗಿದೆ.ಬೆಂಗಳೂರಿನ ಪ್ರಾದೇಶಿಕ ಆಯುಕ್ತರು ಪ್ರತಿ 15 ದಿನಗಳಿಗೊಮ್ಮೆ ಸಕಾಲ ಸೇವೆಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ಮಾಡುವಂತೆ ಬೆಂಗಳೂರು ಪ್ರಾದೇಶಿಕ ಆಯುಕ್ತರಾದ ಹರ್ಷಗುಪ್ತಾ ಅವರಿಗೆ ನಿರ್ದೇಶನ ನೀಡಲಾಗಿದೆ.

ಕೆಲವು ತಹಶೀಲ್ದಾರ್ ಹಾಗೂ ಉಪತಹಶೀಲ್ದಾರ್ ಅವರಿಗೆ ಸಕಾಲದ ಮಹತ್ವವೇ ಗೊತ್ತಿಲ್ಲ. ಹೀಗಾಗಿ ಅ.20ರೊಳಗೆ ಎಲ್ಲಾ ಅಧಿಕಾರಿಗಳಿಗೆ ಸಕಾಲ ಸೇವೆ ಕುರಿತ ಕಾರ್ಯಾಗಾರ ನಡೆಸಿ ಇದು ನಾಗರಿಕ ಸ್ನೇಹಿ ಕಾರ್ಯಕ್ರಮ ಎಂಬುದನ್ನು ಮನದಟ್ಟು ಮಾಡಲು ನಿರ್ದೇಶನ ನೀಡಲಾಗಿದೆ ಎಂದರು.

ಕಳೆದ ಏಳು ವರ್ಷಗಳ ಹಿಂದೆ 151 ಸೇವೆಗಳೊಂದಿಗೆ ಸಕಾಲ ಯೋಜನೆ ಪ್ರಾರಂಭವಾಯಿತು.ಆಗಸ್ಟ್ ವೇಳೆಗೆ 1026 ಸೇವೆಗಳು ಸಕಾಲ ಯೋಜನೆಯಲ್ಲಿ ರಾಜ್ಯದಲ್ಲಿ ಅನುಷ್ಠಾನದಲ್ಲಿವೆ. ಆದರೆ ಸಕಾಲ ಸೇವೆ ಪ್ರಾರಂಭವಾದ ಬೆಂಗಳೂರಿನಲ್ಲೇ ಅನುಷ್ಠಾನ ಕೆಳಮಟ್ಟದಲ್ಲಿದ್ದು, ತೃಪ್ತಿದಾಯಕವಾಗಿಲ್ಲ. ಬಿಬಿಎಂಪಿಯಲ್ಲೂ ಸಕಾಲ ಸೇವೆ ಕೆಳಮಟ್ಟದಲ್ಲಿದೆ.ಇದಕ್ಕೆ ಸಕಾಲ ಸೇವೆಯನ್ನು ಗಂಭೀರವಾಗಿ ಪರಿಗಣಿಸದಿರುವುದು ಬೇಸರ ತಂದಿದೆ ಎಂದರು.

ಇದಕ್ಕೆ ಪ್ರಮುಖ ಕಾರಣ ಸಕಾಲದ ಬದಲಾಗಿ ಮಧ್ಯವರ್ತಿಗಳ ಮೂಲಕ ಜನರಿಗೆ ಸೇವೆ ತಲುಪುತ್ತಿವೆ. ಸೇವೆ ಪಡೆಯಲು ಅನಧಿಕೃತ ಹಣವನ್ನು ಜನರು ಕೊಡುವ ಪರಿಸ್ಥಿತಿ ಮೇಲ್ನೋಟಕ್ಕೆ ಕಂಡುಬಂದಿದೆ. ಇಷ್ಟೇ ದಿನದಲ್ಲಿ  ಸೇವೆ ನೀಡಬೇಕೆಂದು ಸರ್ಕಾರ ನಿಗದಿಪಡಿಸಿಲ್ಲ. ಆಯಾ ಇಲಾಖೆ, ಸಂಸ್ಥೆಗಳೇ ಸೇವೆ ಒದಗಿಸಲು 7 ದಿನ, 14 ದಿನ ಹಾಗೂ 21 ದಿನ ನಿಗದಿಪಡಿಸುವಂತೆ ಒಪ್ಪಿಕೊಂಡಿವೆ ಎಂದು ಹೇಳಿದರು.

ಕಳೆದ 7 ವರ್ಷದಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ 63,90,698 ಅರ್ಜಿಗಳು ಸ್ವೀಕಾರವಾಗಿದ್ದು, 63,40,199 ಅರ್ಜಿಗಳು ವಿಲೇವಾರಿಯಾಗಿವೆ. ಮಾಸಿಕ ಸರಾಸರಿ 84,601 ಅರ್ಜಿಗಳು ಸ್ವೀಕಾರವಾಗಿದ್ದು, 76,736 ಅರ್ಜಿಗಳು ವಿಲೇವಾರಿಯಾಗಿವೆ. ಬೆಂಗಳೂರು ನಗರ ಜಿಲ್ಲೆಗೆ ಇದು ತುಂಬಾ ಕಡಿಮೆಯಾಗಿದೆ ಎಂದರು.

15 ದಿನದೊಳಗೆ ಸೇವೆ ಒದಗಿಸಬೇಕಾದ ಅರ್ಜಿಗೆ 14ನೇ ದಿನ ತಿರಸ್ಕಾರ ಮಾಡುವ ಮನಸ್ಥಿತಿ ಕಂಡುಬಂದಿದೆ.ಅರ್ಜಿ ಸ್ವೀಕರಿಸುವಾಗಲೇ ದಾಖಲೆ ಪರಿಶೀಲಿಸಬೇಕೆಂಬುದಿದೆ.ವಿಧವಾ ವೇತನಕ್ಕೆ ಸಂಬಂಧಿಸಿದಂತೆ 846 ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿರುವುದು ಕಂಡು ಬಂದಿದೆ.ಒಂದು ಸೇವೆಯನ್ನು ನಿರ್ದಿಷ್ಟ ಅವಧಿಯಲ್ಲಿ ಒದಗಿಸಬೇಕು.ಒಂದು ವೇಳೆ ಒದಗಿಸದಿದ್ದ ಇಂತಹ 7 ಪ್ರಕರಣವಾದರೆ ಒಂದು ಡಿಫಾಲ್ಟ್ ಕೇಸ್ ಎಂದು ಪರಿಗಣಿಸಲಾಗುತ್ತದೆ.ಅಂತಹ 348 ಕೇಸುಗಳಿವೆ ಎಂದು ವಿವರಿಸಿದರು.

ಬೆಂಗಳೂರು ನಗರದಲ್ಲಿ 800 ಸೇವಾಸಿಂಧು ಕೇಂದ್ರಗಳು ಹಾಗೂ ಬೆಂಗಳೂರು ಒನ್ ಸೇವೆಗಳ ಮೂಲಕ ಸಕಾಲ ಸೇವೆಯನ್ನು ಪಡೆಯಬಹುದಾಗಿದೆ.ಕಾಲ್‍ಸೆಂಟರ್‍ಮೂಲಕ ಸಕಾಲ ಸೇವೆಯ ಪರಿಶೀಲನೆಯನ್ನೂ ಮಾಡಲಾಗುತ್ತದೆ.

ರಾಜ್ಯದಲ್ಲಿ ಜಾರಿಗೆ ತಂದ ಸಕಾಲಕ್ಕೆ ಬೇರೆ ರಾಜ್ಯಗಳಲ್ಲಿ ಮನ್ನಣೆ ದೊರೆತಿರುವುದಲ್ಲದೆ, ಬೇರೆ ದೇಶಗಳಿಂದಲೂ ಮಾಡಲಾಗುತ್ತಿದೆ. ಹಿತ್ತಲಗಿಡ ಮದ್ದಲ್ಲ ಎಂಬಂತೆ ನಮ್ಮವರಿಗೆ ಅದರ ಮಹತ್ವ ತಿಳಿಯದಿರುವುದು ಬೇಸರದ ಸಂಗತಿ ಎಂದರು.

ಇನ್ನೊಂದು ವಾರದೊಳಗೆ ಸೆಪ್ಟೆಂಬರ್ ಅಂತ್ಯದೊಳಗಿನ ಸಕಾಲ ಸೇವೆಗಳ ಪ್ರಗತಿಯ ರ್ಯಾಂಕ್ ಪಟ್ಟಿ ಬಿಡುಗಡೆ ಮಾಡಲಾಗುವುದು. ಇನ್ನು ಮುಂದೆ ಪ್ರತಿ ತಿಂಗಳು ಜಿಲ್ಲಾವಾರು ಪ್ರಗತಿಯ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು  ಹೇಳಿದರು.

ಸಮಯಕ್ಕೆ ಸರಿಯಾಗಿ ಸಕಾಲ ಸೇವೆ ಒದಗಿಸದ, ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ಪ್ರಾದೇಶಿಕ ಆಯುಕ್ತರಾದ ಹರ್ಷಗುಪ್ತಾ, ರಾಜ್ಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಾಜೀವ್ ಚಾವ್ಲಾ, ಸಕಾಲ ಮಿಷನ್‍ನ ಕಾರ್ಯಾಚರಣೆ ನಿರ್ದೇಶಕ ವರಪ್ರಸಾದ್‍ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ