2,000 ರೂ. ಮುಖಬೆಲೆಯ ನೋಟುಗಳ ಮುದ್ರಣ ಸ್ಥಗಿತ: ಆರ್ ಟಿಐಗೆ ಮಾಹಿತಿ!

ನವದೆಹಲಿ: ಕಳೆದ ಕೆಲ ತಿಂಗಳಿನಿಂದ ಎಟಿಎಂ ಗಳಲ್ಲಿ 2,000 ರು. ನೋಟುಗಳೇಕೆ ಸಿಗುತ್ತಿಲ್ಲ ಎಂದು ನೀವೇನಾದರೂ ಯೋಚಿಸುತ್ತಿದ್ದರೆ ನಿಮ್ಮ ಸಂದೇಹಕ್ಕೆ ಇಲ್ಲಿದೆ ಉತ್ತರ.

ದುಬಾರಿ ಮೌಲ್ಯದ ನೋಟಿನ ಮುದ್ರಣವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಇದಾಗಲೇ ನಿಲ್ಲಿಸಿದೆ. ಇದು ರಿಸರ್ವ್ ಬ್ಯಾಂಕ್ ನ ಅಧಿಕೃತ ಹೇಳಿಕೆಯಾಗಿದ್ದು “ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್” ಪತ್ರಿಕೆ ಆರ್.ಟಿ.ಐ. ಮೂಲಕ ಸಲ್ಲಿಸಿದ್ದ ಅರ್ಜಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಉತ್ತರಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ  ಪ್ರೈವೇಟ್ ಲಿಮಿಟೆಡ್ ಈ ಹಣಕಾಸು ವರ್ಷದಲ್ಲಿ 2,000 ರೂ ಮುಖಬೆಲೆಯ ಒಂದೇ ಒಂದು ನೋಟನ್ನೂ ಮುದ್ರಿಸಿಲ್ಲ ಎಂದು ಆರ್‌ಟಿಐ ನ ವಿವರಣೆಯಲ್ಲಿ ಹೇಳಿದೆ.

ತಜ್ಞರು ಹೇಳುವಂತೆ ದುಬಾರಿ ಮೌಲ್ಯದ ನೋಟುಗಳ ಮುದ್ರಣವನ್ನು ನಿಲ್ಲಿಸುವ ಕ್ರಮವು ಹಣದ ಅಕ್ರಮ ಸಂಗ್ರಹವನ್ನು ತಡೆಯುವಲ್ಲಿ ಸಹಕಾರಿಯಾಗಲಿದೆ. ಕಪ್ಪು ಹಣದ ಹರಿವನ್ನು ತಡೆಯುವ ಸರ್ಕಾರದ ಉಪಕ್ರಮಕ್ಕೆ ಇದು ಪೂರಕವಾಗಿದೆ/”ಹೆಚ್ಚಿನ  ಮೌಲ್ಯದ ನೋಟುಗಳನ್ನು ಚಲಾವಣೆಯಿಂದ ತೆಗೆದುಹಾಕುವುದರಿಂದ ಕಪ್ಪು ಹಣದ ವಹಿವಾಟು ನಡೆಯುವುದು ಕಷ್ಟವಾಗುತ್ತದೆ. ಆದರೆ, ಇದು ಅಪನಗದೀಕರಣಕ್ಕಿಂತ ಉತ್ತಮ ಮಾರ್ಗವಾಗಿದೆ. ಇಲ್ಲಿ ನಿಮಗೆ ಯಾವ ಅಡ್ಡಿಯಾಗುವುದಿಲ್ಲ.ಕೇವಲ ನೋಟಿನ ಚಲಾವಣೆ ಕಡಿಮೆಯಾಗಲಿದೆ.”  ಅರ್ಥಶಾಸ್ತ್ರಜ್ಞ ನಿತಿನ್ ದೇಸಾಯಿ ವಿವರಿಸಿದ್ದಾರೆ.

“ಅನೇಕ ಯುರೋಪಿಯನ್ ರಾಷ್ಟ್ರಗಳು ಇದನ್ನು ಮಾಡಿವೆ. ಆದರೆ ಭಾರತದಲ್ಲಿ,ದೊಡ್ಡ ಅನೌಪಚಾರಿಕ ವಲಯ ಮತ್ತು ಕೃಷಿ ವಲಯವಿದ್ದು ಅದು ಶ್ರೀಮಂತವಾಗಿದೆ.ಇದೀಗ ನೋಟು ಮುದ್ರಣ ನಿಲ್ಲಿಸುವುದರಿಂದ ಒಟ್ಟು ಚಲಾವಣೆಯ ಮೌಲ್ಯವನ್ನು ಕಾಪಾಡಿಕೊಳ್ಳಲಾಗುತ್ತಿದೆ ಮತ್ತು ಹೆಚ್ಚಿನ ಸಮಸ್ಯೆ ಇರುವುದಿಲ್ಲ.” ಅವರು ಹೇಳಿದ್ದಾರೆ.

ಅರ್ಥಶಾಸ್ತ್ರಜ್ಞ ಮತ್ತು ಲೇಖಕ ಶೇರ್ ಸಿಂಗ್ ಸಹ ದೇಸಾಯಿಯವರ ಮಾತನ್ನು ಅನುಮೋದಿಸಿದ್ದಾರೆ. “ಬಹುಶಃ, ಅವರು ದೊಡ್ಡ ಪ್ರಮಾಣದ ಹಣ ಹೊಂದುವುದು ಅಥವಾ ಕಪ್ಪು ಹಣವನ್ನು ಹೊಂದುವುದನ್ನು ತಡೆಯುವ ಪ್ರಯತ್ನದಲ್ಲಿದ್ದಾರೆ. ಇದಲ್ಲದೆ, ಸರ್ಕಾರವು ಹೆಚ್ಚು ಹೆಚ್ಚು ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುತ್ತಿದೆ.” ಅವರು ಹೇಳಿದ್ದಾರೆ.

ನವೆಂಬರ್ 2016ರಲ್ಲಿ ಹಳೆಯ  `500 ಮತ್ತು` 1,000 ಮುಖಬೆಲೆಯ ನೋಟುಗಳನ್ನು  ನಿಷೇಧಿಸುವುದಾಗಿ ಸರ್ಕಾರದ ಹಠಾತ್ ಘೋಷಣೆಯ ನಂತರ ಆರ್‌ಬಿಐ 2,000 ರೂ ನೋಟುಗಳನ್ನು ಪರಿಚಯಿಸಿತ್ತು.ರಿಸರ್ವ್ ಬ್ಯಾಂಕಿನ ಆರ್‌ಟಿಐ ಉತ್ತರದ ಪ್ರಕಾರ, 2016-17ರ ಆರ್ಥಿಕ ವರ್ಷದಲ್ಲಿ 2,000 ರೂಗಳ 3,542.991 ಮಿಲಿಯನ್ ನೋಟುಗಳನ್ನು ಮುದ್ರಿಸಲಾಗಿದೆ.ಆದಾಗ್ಯೂ, 2017-18ನೇ ಸಾಲಿನಲ್ಲಿ ಮುದ್ರಣದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ ಮತ್ತು ಕೇವಲ 111.507 ಮಿಲಿಯನ್ ನೋಟುಗಳನ್ನು ಮಾತ್ರ ಮುದ್ರಿಸಲಾಗಿದೆ.ಇನ್ನು  2018-19ನೇ ಸಾಲಿನಲ್ಲಿ 46.690 ಮಿಲಿಯನ್ ನೋಟುಗಳು ಮುದ್ರಣವಾಗಿದೆ.

ಕಳ್ಳಸಾಗಣೆಯಂತಹ ಅಕ್ರಮ ಉದ್ದೇಶಗಳಿಗಾಗಿ ಬಳಸಲು ಸುಲಭವಾದ ಕಾರಣ 2,000 ರೂ ನೋಟುಗಳ ಹೆಚ್ಚಿನ ಚಲಾವಣೆಯು ಸರ್ಕಾರದ ಉದ್ದೇಶಗಳನ್ನು ವಿಫಲಗೊಳಿಸಲುಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜನವರಿಯಲ್ಲಿ ಆಂಧ್ರ-ತಮಿಳುನಾಡು ಗಡಿಯಲ್ಲಿ ದಾಖಲೆಗಳಿಲ್ಲದ  6 ಕೋಟಿ ರೂ. ಮೊತ್ತದಷ್ಟು  2 ಸಾವಿರ ರೂ. ನೋಟುಗಳು ಪತ್ತೆಯಾಗಿತ್ತು.

ಈ ವರ್ಷದ ಆರಂಭದಲ್ಲಿ 2,000 ರೂ ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿದೆಯೆಂದು ವರದಿಗಳು ಬಂದಿದ್ದವು, ಆದರೆ ಸರ್ಕಾರ ಅದನ್ನು ನಿರಾಕರಿಸಿತ್ತು. ಇತ್ತೀಚಿನ ಆರ್‌ಬಿಐ ದತ್ತಾಂಶವು ಸಹ ರೂ .2,000 ನೋಟುಗಳ ಚಲಾವಣೆಮೇಣ ಕಡಿಮೆಯಾಗಿದೆ ಎಂದು ಬಹಿರಂಗಪಡಿಸಿದೆ. ಮಾರ್ಚ್ 2018ರಲ್ಲಿ ಚಲಾವಣೆಯಲ್ಲಿರುವ ಒಟ್ಟೂ ನೋಟುಗಳ ಪ್ರಮಾಣದಲ್ಲಿ ಕೇವಲ ಶೇ.3.3ರಷ್ಟು 2,000 ಮುಖಬೆಲೆ ನೋಟುಗಳಿದ್ದವು. ಇದು 2019 ಹಣಕಾಸು ವರ್ಷದಲ್ಲಿ ಶೇ.3ಕ್ಕೆ ಇಳಿಕೆಯಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ