ಬೆಂಗಳೂರು: ಐಟಿ ವಿಚಾರಣೆಗೆ ಹೆದರಿ ನಿನ್ನೆ ಆತ್ಮಹತ್ಯೆಗೆ ಶರಣಾಗಿದ್ದ ಮಾಜಿ ಡಿಸಿಎಂ ಪರಮೇಶ್ವರ್ ಪಿಎ ರಮೇಶ್ ಅವರ ಅಂತ್ಯಕ್ರಿಯೆ ಇಂದು ಹುಟ್ಟೂರಿನಲ್ಲಿ ನಡೆಯಲಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ರಮೇಶ್ ಸಾವಿಗೆ ಐಟಿ ಕಿರುಕುಳವೇ ಕಾರಣವಾ ಅಥವಾ ಬೇರೆ ಕಾರಣ ಇದೆಯಾ ಎಂಬುದು ಮಾತ್ರ ನಿಗೂಢವಾಗಿದೆ. ಹೀಗಾಗಿ ಪರಮೇಶ್ವರ್ ಸಾವಿನ ಸುತ್ತ ನೂರೆಂಟು ಅನುಮಾನಗಳ ಹುತ್ತ ಬೆಳೆದಿದೆ. ಜೊತೆಗೆ ರಮೇಶ್ ಕುಟುಂಬಸ್ಥರು ಈ ಸಂಬಂಧ ದೂರು ಕೂಡ ದಾಖಲಿಸಿದ್ಧಾರೆ. ಆ ದೂರಿನ ತನಿಖೆ ನಿಜಕ್ಕೂ ಆಗುತ್ತಾ ಎಂಬ ಶಂಕೆ ಮೂಡಿದೆ.
ಆತ್ಮಹತ್ಯೆ ಹಾಗೂ ಅನುಮಾನಗಳ ಮಧ್ಯೆಯೇ ಕುಟುಂಬಸ್ಥರು ರಮೇಶ್ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ಧಾರೆ. ಹುಟ್ಟೂರಾದ ರಾಮನಗರ ಜಿಲ್ಲೆಯ ಮೆಳೇಹಳ್ಳಿದೊಡ್ಡಿಯಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ರಮೇಶ್ ಅಂತ್ಯಕ್ರಿಯೆ ನಡೆಯಲಿದೆ. ಒಕ್ಕಲಿಗರ ಸಂಪ್ರದಾಯದಂತೆ ಅಂತ್ಯಸಂಸ್ಕಾರಕ್ಕೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದ್ದು, ರಮೇಶ್ ಅವರ ಜಮೀನಿನಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ.
ನಿನ್ನೆ ಬೆಂಗಳೂರು ವಿವಿಯ ಕ್ಯಾಂಪಸ್ನಲ್ಲಿ ಪರಮೇಶ್ವರ್ ಪಿಎ ರಮೇಶ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಐಟಿ ವಿಚಾರಣೆಗೆ ಹೆದರಿ ಸಾಯುವ ನಿರ್ಧಾರ ಮಾಡಿದ್ಧಾರೆ ಎಂದು ತಿಳಿದು ಬಂದಿತ್ತು. ರಮೇಶ್ ಸಾವಿಗೆ ಐಟಿ ಅಧಿಕಾರಿಗಳ ಕಿರುಕುಳವೇ ಕಾರಣ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದರು. ಪ್ರಕರಣ ಕುರಿತು ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದರು.