ಜಿ.ಪರಮೇಶ್ವರ್ ಮನೆ ಮೇಲಿನ ಐಟಿ ದಾಳಿ ಅಂತ್ಯ; ಮಂಗಳವಾರ ವಿಚಾರಣೆಗೆ ಹಾಜರಾಗಲು ಸೂಚನೆ

ಬೆಂಗಳೂರುಮಾಜಿ ಡಿಸಿಎಂ ಪರಮೇಶ್ವರ್ ಮನೆ​ ಮೇಲಿನ ಐಟಿ ದಾಳಿ ಇಂದು ಮುಕ್ತಾಯವಾಗಿದೆ.  ಸದಾಶಿವನಗರದಲ್ಲಿರುವ ಪರಮೇಶ್ವರ್ ಮನೆಯಲ್ಲಿ ಐಟಿ ಅಧಿಕಾರಿಗಳು ಬೆಳಗಿನ ಜಾವ 3.30ರವರೆಗೆ ಪರಿಶೀಲನೆ ನಡೆಸಿದ್ದರು. ಸದ್ಯ ಅವರ ಮನೆಯಲ್ಲಿ ಐಟಿ ದಾಳಿ ಅಂತ್ಯವಾಗಿದ್ದು, ಬೇರೆ ಕಡೆ ಐಟಿ ದಾಳಿ ಮುಂದುವರೆದಿದೆ.

ಸಿಕ್ಕ ದಾಖಲೆಗಳ ಬಗ್ಗೆ ಪರಮೇಶ್ವರ್​ ಮನೆಯಲ್ಲಿಯೇ ವಿಚಾರಣೆ ನಡೆಸಿದ್ದರು.  ಹೀಗಾಗಿ ಪರಮೇಶ್ವರ್​ ಮನೆಯಲ್ಲಿಯೇ ಐಟಿ ಅಧಿಕಾರಿಗಳು ವಾಸ್ತವ್ಯ ಹೂಡಿದ್ದರು. 15 ಜನ ಐಟಿ ಅಧಿಕಾರಿಗಳು 15 ಗಂಟೆಗಳ ಕಾಲ ನಿನ್ನೆ ಪರೀಶೀಲನೆ ನಡೆಸಿದ್ದರು. 2 ದಿನ ಬಿಟ್ಟು ಐಟಿ ಕಚೇರಿಗೆ ವಿಚಾರಣೆಗೆ ಬರುವಂತೆ ಐಟಿ ಅಧಿಕಾರಿಗಳು ಪರಮೇಶ್ವರ್​ಗೆ ಸೂಚನೆ ನೀಡಿದ್ದಾರೆ.
ಅಕ್ಟೋಬರ್​ 10ರಂದು ಮಾಜಿ ಡಿಸಿಎಂ ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆಗಳು ಹಾಗೂ ಮನೆ ಮೇಲೆ ಐಟಿ ದಾಳಿ ನಡೆದಿತ್ತು. ಮಹತ್ವದ ದಾಖಲೆಗಳನ್ನು ಪರಿಶೀಲಿಸಿದ ಅಧಿಕಾರಿಗಳು ಪರಮೇಶ್ವರ್​ ಅವರನ್ನು ವಿಚಾರಣೆ ನಡೆಸಿದ್ದರು.

ಈ ಐಟಿ ದಾಳಿಯಲ್ಲಿ ಬರೋಬ್ಬರಿ 100 ಕೋಟಿ ಅಕ್ರಮ ಸಂಪಾದಿತ ಹಣ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಇದರ ಜೊತೆಗೆ ಅಘೋಷಿತ ಆಸ್ತಿ ಮೌಲ್ಯವೇ 8.82 ಕೋಟಿ ಇದೆ. ಎಂಬಿಬಿಎಸ್​ ಮತ್ತು ಪಿಜಿ ಸೀಟುಗಳ ಹಂಚಿಕೆಯಿಂದ 100 ಕೋಟಿ ರೂ. ಆದಾಯ ಪಡೆದಿದ್ದಾರೆ ಎನ್ನಲಾಗಿದೆ. 185 ಸೀಟುಗಳಲ್ಲಿ ಪ್ರತಿ ಸೀಟ್​ಗೆ 50-60ಲಕ್ಷ ಹಣ ಪಡೆದು ಗೋಲ್​ಮಾಲ್​​​ ಮಾಡಿ 100 ಕೋಟಿ ರೂ. ಹಣ ಕಬಳಿಸಿದ್ದಾರೆ ಎನ್ನಲಾಗುತ್ತಿದೆ.

ಮೆಡಿಕಲ್​ ಸೀಟ್​ ದಂಧೆಯಲ್ಲಿ ಬಂದ ಹಣವನ್ನು 8 ನೌಕರರ ಹೆಸರಲ್ಲಿ ಬ್ಯಾಂಕ್​ನಲ್ಲಿ ಠೇವಣಿ ಇಟ್ಟಿದ್ದಾರೆನ್ನಲಾಗಿದೆ. ಬ್ಯಾಂಕ್​ನಲ್ಲಿದ್ದ 4.6 ಕೋಟಿ ಹಣ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ದಾಖಲೆ ಇಲ್ಲದ 4.22 ಕೋಟಿ ನಗದು ಹಣವನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ರಿಯಲ್​ ಎಸ್ಟೇಟ್​, ಶಿಕ್ಷಣ ಸಂಸ್ಥೆ, ಹೋಟೆಲ್​ ಉದ್ಯಮದಲ್ಲಿ ಹಣ ಹೂಡಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಅಘೋಷಿತ ಆಸ್ತಿ ಬಗ್ಗೆ ವಿಚಾರಣೆ ನಡೆಸಲು ಐಟಿ ನೋಟಿಸ್​ ನೀಡಿದೆ. ಈ ಬಗ್ಗೆ ಸೂಕ್ತ ದಾಖಲೆ ಕೊಟ್ಟರೆ ಪರಮೇಶ್ವರ್ ಬಂಧನದಿಂದ ಬಚಾವ್​ ಆಗಲಿದ್ಧಾರೆ. ಹವಾಲ ದಂಧೆ, ಬೇನಾಮಿ ಆಸ್ತಿ ಪತ್ತೆಯಾಗಿದೆ. ಹೀಗಾಗಿ ಪ್ರಕರಣವನ್ನು ಇ.ಡಿಗೆ ವರ್ಗಾಯಿಸಬಹುದು. ಇಡಿ ಸಮನ್ಸ್​ ಕೊಟ್ಟು ಬೇನಾಮಿ ಆಸ್ತಿಗಳ ಬಗ್ಗೆ ವಿಚಾರಣೆಗೆ ಕರೆಯಬಹುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ