ಬೆಂಗಳೂರು: ಮಾಜಿ ಡಿಸಿಎಂ ಪರಮೇಶ್ವರ್ ಮನೆ ಮೇಲಿನ ಐಟಿ ದಾಳಿ ಇಂದು ಮುಕ್ತಾಯವಾಗಿದೆ. ಸದಾಶಿವನಗರದಲ್ಲಿರುವ ಪರಮೇಶ್ವರ್ ಮನೆಯಲ್ಲಿ ಐಟಿ ಅಧಿಕಾರಿಗಳು ಬೆಳಗಿನ ಜಾವ 3.30ರವರೆಗೆ ಪರಿಶೀಲನೆ ನಡೆಸಿದ್ದರು. ಸದ್ಯ ಅವರ ಮನೆಯಲ್ಲಿ ಐಟಿ ದಾಳಿ ಅಂತ್ಯವಾಗಿದ್ದು, ಬೇರೆ ಕಡೆ ಐಟಿ ದಾಳಿ ಮುಂದುವರೆದಿದೆ.
ಸಿಕ್ಕ ದಾಖಲೆಗಳ ಬಗ್ಗೆ ಪರಮೇಶ್ವರ್ ಮನೆಯಲ್ಲಿಯೇ ವಿಚಾರಣೆ ನಡೆಸಿದ್ದರು. ಹೀಗಾಗಿ ಪರಮೇಶ್ವರ್ ಮನೆಯಲ್ಲಿಯೇ ಐಟಿ ಅಧಿಕಾರಿಗಳು ವಾಸ್ತವ್ಯ ಹೂಡಿದ್ದರು. 15 ಜನ ಐಟಿ ಅಧಿಕಾರಿಗಳು 15 ಗಂಟೆಗಳ ಕಾಲ ನಿನ್ನೆ ಪರೀಶೀಲನೆ ನಡೆಸಿದ್ದರು. 2 ದಿನ ಬಿಟ್ಟು ಐಟಿ ಕಚೇರಿಗೆ ವಿಚಾರಣೆಗೆ ಬರುವಂತೆ ಐಟಿ ಅಧಿಕಾರಿಗಳು ಪರಮೇಶ್ವರ್ಗೆ ಸೂಚನೆ ನೀಡಿದ್ದಾರೆ.
ಅಕ್ಟೋಬರ್ 10ರಂದು ಮಾಜಿ ಡಿಸಿಎಂ ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆಗಳು ಹಾಗೂ ಮನೆ ಮೇಲೆ ಐಟಿ ದಾಳಿ ನಡೆದಿತ್ತು. ಮಹತ್ವದ ದಾಖಲೆಗಳನ್ನು ಪರಿಶೀಲಿಸಿದ ಅಧಿಕಾರಿಗಳು ಪರಮೇಶ್ವರ್ ಅವರನ್ನು ವಿಚಾರಣೆ ನಡೆಸಿದ್ದರು.
ಈ ಐಟಿ ದಾಳಿಯಲ್ಲಿ ಬರೋಬ್ಬರಿ 100 ಕೋಟಿ ಅಕ್ರಮ ಸಂಪಾದಿತ ಹಣ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಇದರ ಜೊತೆಗೆ ಅಘೋಷಿತ ಆಸ್ತಿ ಮೌಲ್ಯವೇ 8.82 ಕೋಟಿ ಇದೆ. ಎಂಬಿಬಿಎಸ್ ಮತ್ತು ಪಿಜಿ ಸೀಟುಗಳ ಹಂಚಿಕೆಯಿಂದ 100 ಕೋಟಿ ರೂ. ಆದಾಯ ಪಡೆದಿದ್ದಾರೆ ಎನ್ನಲಾಗಿದೆ. 185 ಸೀಟುಗಳಲ್ಲಿ ಪ್ರತಿ ಸೀಟ್ಗೆ 50-60ಲಕ್ಷ ಹಣ ಪಡೆದು ಗೋಲ್ಮಾಲ್ ಮಾಡಿ 100 ಕೋಟಿ ರೂ. ಹಣ ಕಬಳಿಸಿದ್ದಾರೆ ಎನ್ನಲಾಗುತ್ತಿದೆ.
ಮೆಡಿಕಲ್ ಸೀಟ್ ದಂಧೆಯಲ್ಲಿ ಬಂದ ಹಣವನ್ನು 8 ನೌಕರರ ಹೆಸರಲ್ಲಿ ಬ್ಯಾಂಕ್ನಲ್ಲಿ ಠೇವಣಿ ಇಟ್ಟಿದ್ದಾರೆನ್ನಲಾಗಿದೆ. ಬ್ಯಾಂಕ್ನಲ್ಲಿದ್ದ 4.6 ಕೋಟಿ ಹಣ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ದಾಖಲೆ ಇಲ್ಲದ 4.22 ಕೋಟಿ ನಗದು ಹಣವನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ರಿಯಲ್ ಎಸ್ಟೇಟ್, ಶಿಕ್ಷಣ ಸಂಸ್ಥೆ, ಹೋಟೆಲ್ ಉದ್ಯಮದಲ್ಲಿ ಹಣ ಹೂಡಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಅಘೋಷಿತ ಆಸ್ತಿ ಬಗ್ಗೆ ವಿಚಾರಣೆ ನಡೆಸಲು ಐಟಿ ನೋಟಿಸ್ ನೀಡಿದೆ. ಈ ಬಗ್ಗೆ ಸೂಕ್ತ ದಾಖಲೆ ಕೊಟ್ಟರೆ ಪರಮೇಶ್ವರ್ ಬಂಧನದಿಂದ ಬಚಾವ್ ಆಗಲಿದ್ಧಾರೆ. ಹವಾಲ ದಂಧೆ, ಬೇನಾಮಿ ಆಸ್ತಿ ಪತ್ತೆಯಾಗಿದೆ. ಹೀಗಾಗಿ ಪ್ರಕರಣವನ್ನು ಇ.ಡಿಗೆ ವರ್ಗಾಯಿಸಬಹುದು. ಇಡಿ ಸಮನ್ಸ್ ಕೊಟ್ಟು ಬೇನಾಮಿ ಆಸ್ತಿಗಳ ಬಗ್ಗೆ ವಿಚಾರಣೆಗೆ ಕರೆಯಬಹುದು.