ಚೆನ್ನೈ: ಮಹಾಬಲಿಪುರಂನಲ್ಲಿ ನಡೆಯುತ್ತಿರುವ ಎರಡು ದಿನಗಳ ಅನೌಪಚಾರಿಕ ದ್ವಿಪಕ್ಷೀಯ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್’ಪಿಂಗ್ ಅವರು ಚೆನ್ನೈಗೆ ಆಗಮಿಸಿದ್ದು, 2ನೇ ದಿನದ ಅನೌಪಚಾರಿಕ ಶೃಂಗಸಭೆಯಲ್ಲಿ ಉಭಯ ನಾಯಕರು ಗಡಿ ಭದ್ರತೆ, ವ್ಯಾಪಾರ ಹಾಗೂ ಭಯೋತ್ಪಾದನೆ ಕುರಿತಂತೆ ಮಹತ್ವದ ಮಾತುಕತೆ ನಡೆಸಲಿದ್ದಾರೆಂದು ಶನಿವಾರ ತಿಳಿದುಬಂದಿದೆ.
ಚೆನ್ನೈಗೆ ಆಗಮಿಸಿರುವ ಉಭಯ ನಾಯಕರಿಗೆ ತಮಿಳುನಾಡು ಸರ್ಕಾರ ಅಭೂತಪೂರ್ವ ಸ್ವಾಗತ ಕೋರಿದ್ದು, ಎರಡು ದಿನಗಳ ಶೃಂಗಸಬೆ ನಿಮಿತ್ತ 5 ಸಾವಿರ ಪೊಲೀಸರ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿದೆ.
ಪೂರ್ವ ಕರಾವಳಿ ರಸ್ತೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ರಸ್ತೆಯಲ್ಲಿ ಬರುವ ಪ್ರತೀ ವಾಹನಗಳನ್ನೂ ತಪಾಸಣೆಗೊಳಪಡಿಸಿ, ಬದಲಾವಣೆಗೊಂಡಿರುವ ಮಾರ್ಗದ ಮೂಲಕ ತೆರಳುವಂತೆ ಸೂಚಿಸಲಾಗುತ್ತಿದೆ.
ಚೆನ್ನೈನ ಐಷಾರಾಮಿ ಹೋಟೆಲ್ ಐಟಿಸಿ ಚೋಲಾ ಶೆರಟಾನ್ ನಲ್ಲಿರುವ ಚೀನಾ ಅಧ್ಯಕ್ಷರು 10 ಗಂಟೆಗೆ ಪ್ರಧಾನಿ ಮೋದಿಯವರೊಂದಿಗೆ ಮತ್ತೊಂದು ಸುತ್ತಿನ ಅನೌಪಚಾರಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಉಭಯ ನಾಯಕರ ನಡುವೆ ತಾಜ್ ಫಿಶರ್ ಮ್ಯಾನ್ಸ್ ಕೋವ್ ರೆಸಾರ್ಟ್ ನಲ್ಲಿ ಅನೌಪಚಾರಿಕ ಸಭೆ ನಡೆಯಲಿದೆ. ಸಭೆ ಬಳಿಯ ಉಭಯ ದೇಶಗಳ ಉನ್ನತಾಧಿಕಾರಿಗಳ ಮಟ್ಟದ ಸಭೆ ನಡೆಯಲಿದೆ.
ಸಭೆಗಳ ಬಳಿಕ ಪ್ರಧಾನಿ ಮೋದಿ ಹಾಗೂ ಕ್ಲಿ ಜಿನ್ ಪಿಂಗ್ ನಡುವಿನ ಮಾತುಕತೆ ಕುರಿತು ಜಂಟಿ ಹೇಳಿಕೆ ಬಿಡುಗಡೆಯಾಗಲಿದೆ. ಬಳಿಕ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರಿಗೆ ಪ್ರಧಾನಿ ಮೋದಿಯವರು ವಿಶೇಷ ಔತಣ ಕೂಟ ನೀಡಲಿದ್ದಾರೆ.