ರೈತ ಸಂದಿಂದ ನಾಳೆ ವಿಧಾನಸೌಧಕ್ಕೆ ಮುತ್ತಿಗೆ

ಬೆಂಗಳೂರು,ಅ.9-ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಆರೋಪಿಸಿ ರೈತ ಸಂಘ ನಾಳೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು, ನಾಳೆ ಬೆಳಗ್ಗೆ 11 ಗಂಟೆಗೆ ನಾವು ಪ್ರತಿಭಟನೆ ನಡೆಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದೇವೆ. ವಿಧಾನಮಂಡಲದ ಅಧಿವೇಶನ ನಡೆಯುತ್ತಿರುವ ವೇಳೆ ಸರ್ಕಾರದ ಗಮನಸೆಳೆಯಲು ಹೋರಾಟ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಬೇಡಿಕೆಗಳು:

ನೆರೆ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿದ್ದು ಕೂಡಲೇ ಸಂತ್ರಸ್ತರ ನೆರವಿಗೆ ಧಾವಿಸಬೇಕು, ಮನೆ ಕಳೆದುಕೊಂಡ 2.5 ಲಕ್ಷ ನಿರ್ವಸತಿಗರಿಗೆ ಮನೆ ನಿರ್ಮಿಸಿಕೊಡಬೇಕು.

ತಾತ್ಕಾಲಿಕ ಪರಿಹಾರವನ್ನು ಪೂರ್ಣ ಪ್ರಮಾಣದಲ್ಲಿ ಎಲ್ಲ ನಿರ್ವಸತಿಗರಿಗೂ ನೀಡಬೇಕು, ಆಲಮಟ್ಟಿ ಅಣೆಕಟ್ಟು ಎತ್ತರವನ್ನು ಸುಪ್ರೀಂಕೋರ್ಟ್ ತೀರ್ಪಿನ ಅನುಸಾರ 124 ಮೀಟರ್ ಹೆಚ್ಚಿಸಲು ಯೋಜನೆ ಜಾರಿಗೊಳಿಸಬೇಕು.

ಕಾವೇರಿ ವಿವಾದದಲ್ಲಿ ಕೇಂದ್ರ ಸರ್ಕಾರ ನೀರು ನಿರ್ವಹಣಾ ಮಂಡಳಿ ರಚನೆ ಮಾಡಿದೆ.ಅದೇ  ಮಾದರಿಯಲ್ಲಿ ಕೃಷ್ಣ ನದಿಯ ನೀರು ನಿರ್ವಹಣಾ ಮಂಡಳಿ ರಚನೆಯಾಗಿದ್ದರೆ ಪ್ರವಾಹ ಸಂದರ್ಭದಲ್ಲಿ ಕರ್ನಾಟಕದ ಕೃಷ್ಣ ನದಿಪಾತ್ರದ ಜಿಲ್ಲೆಗಳಿಗೆ ಹೆಚ್ಚಿನ ಹಾನಿಯಾಗುತ್ತಿರಲಿಲ್ಲ.

ಮಹಾರಾಷ್ಟ್ರ ಸರ್ಕಾರ ಮನಸೋ ಇಚ್ಛೆ ನೀರು ಬಿಡುಗಡೆ ಮಾಡಿದ್ದರಿಂದಾಗಿ ಪ್ರವಾಹದಲ್ಲಿ ಸಾಕಷ್ಟು ಹಾನಿಯಾಗಿದೆ.ಕೂಡಲೇ ಕೇಂದ್ರ ಸರ್ಕಾರ ನೀರು ನಿರ್ವಹಣಾ ಮಂಡಳಿ ರಚಿಸಬೇಕು.

ಗೋದಾವರಿ ನದಿಯಲ್ಲಿನ 24 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳಲು ಯೋಜನೆಗಳನ್ನು ರೂಪಿಸಿ ಕೈಗೆತ್ತಿಕೊಳ್ಳಬೇಕು.

ಮಹಾದಾಯಿ ನದಿ ವಿವಾದದಲ್ಲಿ ನ್ಯಾಯಾಧೀಕರಣ ನೀಡಿರುವ ಮಧ್ಯಂತರ ತೀರ್ಪನ್ನು ಜಾರಿಗೆ ತರಬೇಕು, ಮೇಕೆದಾಟು ಯೋಜನೆಯನ್ನು ಕೂಡಲೇ ಕೈಗೆತ್ತಿಕೊಳ್ಳಬೇಕೆಂದು ಒತ್ತಾಯಿಸುವುದಾಗಿ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ