ಇಂದು ಬಿಜೆಪಿ ಮಹತ್ವದ ಶಾಸಕಾಂಗ ಸಭೆ

ಬೆಂಗಳೂರು,ಅ.9-ನಾಳೆ ವಿಧಾನಮಂಡಲದ ಉಭಯ ಸದನಗಳ ಚಳಿಗಾಲ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಇಂದು ಬಿಜೆಪಿ ಮಹತ್ವದ ಶಾಸಕಾಂಗ ಸಭೆ ನಡೆಯಲಿದೆ.

ಸಂಜೆ 6 ಗಂಟೆಗೆ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಶಾಸಕಾಂಗ ಸಭೆ ನಡೆಯಲಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು, ಮುಖ್ಯ ಸಚೇತಕರು ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ.

ಇದಕ್ಕೂ ಮುನ್ನ  ಸಂಜೆ 4 ಗಂಟೆಗೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಿಎಸ್‍ವೈ ಅವರು ಸಚಿವರ ಸಭೆ ಕರೆದಿದ್ದಾರೆ. ಸಭೆಗೆ ಎಲ್ಲ ಸಚಿವರು ಕಡ್ಡಾಯವಾಗಿ ಭಾಗವಹಿಸುವಂತೆ ಸೂಚಿಸಿದ್ದಾರೆ.

ಸಭೆಯಲ್ಲಿ ಪ್ರಮುಖವಾಗಿ ನಾಳೆ ಕಲಾಪದಲ್ಲಿ ಪ್ರತಿಪಕ್ಷಗಳು ಎತ್ತುವ ಪ್ರತಿಯೊಂದಕ್ಕೂ ಸಮರ್ಪಕ ಉತ್ತರ ನೀಡಿ ತಿರುಗೇಟು ನೀಡಬೇಕೆಂಬ ಸೂಚನೆಯನ್ನು ಕೊಡಲಿದ್ದಾರೆ.

ಮುಖ್ಯವಾಗಿ ಇತ್ತೀಚೆಗೆ ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ರಾಜ್ಯ ಸರ್ಕಾರದ ಖಜಾನೆ ಖಾಲಿ ವಿಷಯ ಸದನದಲ್ಲಿ  ಪ್ರತಿಧ್ವನಿಸುವ ಸಾಧ್ಯತೆ ಇದೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನೆರೆ ಪರಿಹಾರ ನಿರ್ವಹಣೆ ಮಾಡಿರುವುದು ಸರ್ಕಾರದ ಖಜಾನೆಯಿಂದ ಬಿಡುಗಡೆಯಾಗಿರುವ ಹಣ, ಕೇಂದ್ರದಿಂದ ಬಂದಿರುವ ಹಣ ಸೇರಿದಂತೆ ಪ್ರತಿಯೊಂದನ್ನು ಅಂಕಿಸಂಖ್ಯೆಗಳ ಸಮೇತ ಸದನದ ಮುಂದಿಡುವಂತೆ ಸಚಿವರಿಗೆ ಸಿಎಂ ನಿರ್ದೇಶನ ನೀಡಿದ್ದಾರೆ.

ನೆರೆ ಪರಿಹಾರಕ್ಕಾಗಿ ಸರ್ಕಾರ ವಿವಿಧ ಬಾಬ್ತುಗಳಿಂದ 3000 ಕೋಟಿಗೂ ಅಧಿಕ ಹಣವನ್ನು ಬಿಡುಗಡೆ ಮಾಡಿದ್ದು, ಜಿಲ್ಲಾವಾರು ಫಲಾನುಭವಿಗಳ ಪಟ್ಟಿಯನ್ನು ಸಹ ಸಿದ್ದಪಡಿಸಲಾಗಿದೆ.

ನೆರೆಯಿಂದ ಎಷ್ಟು ಮನೆಗಳು ಹಾನಿಗೊಳಗಾಗಿವೆ?ಕುಸಿದು ಬಿದ್ದಿರುವ ಮನೆಗಳು, ಕೊಚ್ಚಿ ಹೋಗಿರುವ ಬೆಳೆಗಳು, ಜಾನುವಾರುಗಳ ಸಂಖ್ಯೆ ಸೇರಿದಂತೆ ಎಲ್ಲವನ್ನೂ ಈಗಾಗಲೇ ಸಿದ್ದಪಡಿಸಲಾಗಿದೆ.

ಪ್ರಸಕ್ತ ವರ್ಷ ನೆರೆ ಉಂಟಾಗಿದ್ದರಿಂದ ಒಂದಿಷ್ಟು ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಿದ್ದರೂ ರಾಜ್ಯದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿಲ್ಲ ಎಂದು ಸ್ವತಃ ಹಣಕಾಸು ಇಲಾಖೆ ಅಧಿಕಾರಿಗಳೇ ಖಚಿತ ಪಡಿಸಿದ್ದಾರೆ.

ಈ ವರ್ಷ 76,046 ಕೋಟಿ  ವಾಣಿಜ್ಯ ತೆರಿಗೆ ಸಂಗ್ರಹದ ಗುರಿಯನ್ನು ಹೊಂದಲಾಗಿದೆ. ಸೆಪ್ಟೆಂಬರ್ ಅಂತ್ಯಕ್ಕೆ ಸುಮಾರು 40 ಸಾವಿರ ಕೋಟಿಗೂ ಅಧಿಕ  ತೆರಿಗೆ ಸಂಗ್ರಹವಾಗಿದೆ.

ಅಬಕಾರಿ, ಮೋಟಾರು ವಾಹನ ತೆರಿಗೆ, ನೋಂದಣಿ ಮತ್ತು ಮುದ್ರಾಂಕ ತೆರಿಗೆಯಲ್ಲೂ ನಿರೀಕ್ಷಿತ  ಗುರಿಯನ್ನು ಮುಟ್ಟಿರುವುದರಿಂದ ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿಲ್ಲ. ಆದರೂ ಪ್ರತಿಪಕ್ಷಗಳು ಈ ವಿಷಯವನ್ನು ಪ್ರಸ್ತಾಪ ಮಾಡಬಹುದೆಂಬ ಹಿನ್ನೆಲೆಯಲ್ಲಿ ಅಂಕಿಸಂಖ್ಯೆಗಳನ್ನು ಸಿದ್ದಪಡಿಸಿಕೊಳ್ಳುವಂತೆ ಇಲಾಖೆಯ ಸಚಿವರಿಗೆ ಬಿಎಸ್‍ವೈ ಸೂಚನೆ ಕೊಟ್ಟಿದ್ದಾರೆ.

ಉಳಿದಂತೆ ಪ್ರತಿಪಕ್ಷಗಳಿಂದ  ವ್ಯಕ್ತವಾಗುವ ಯಾವುದೇ ಆಕ್ಷೇಪಗಳಿಗೂ  ಆಪರೇಷನ್ ಕಮಲ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪ್ರಕರಣ, ಅಧಿಕಾರಿಗಳ ವರ್ಗಾವಣೆ, ಹಿಂದಿನ ಸರ್ಕಾರದಲ್ಲಿ ನಡೆದಿರುವ ಕಾಮಗಾರಿಗಳನ್ನು ತಡೆ ಹಿಡಿದಿರುವುದು ಸೇರಿದಂತೆ ಯಾವುದೇ ವಿಷಯ ಪ್ರಸ್ತಾಪಿಸಿದರೂ ಸದನದಲ್ಲಿ ಉತ್ತರಿಸುವ ಮೂಲಕ ತಿರುಗೇಟು ನೀಡಲು ಬಿಜೆಪಿ ಕೂಡ ಸಜ್ಜಾಗಿದೆ.

ಮೂರು ದಿನಗಳ ಅಧಿವೇಶನ ಇದಾಗಿರುವುದರಿಂದ ಪ್ರತಿಪಕ್ಷಗಳ ಒಂದೊಂದು ದಾಳಿಯನ್ನು ಸಮರ್ಪಕವಾಗಿ ಎದುರಿಸಲು ಬಿಎಸ್‍ವೈ ಶಾಸಕರಿಗೆ ಶಾಸಕಾಂಗ ಸಭೆಯಲ್ಲಿ ಸೂಚನೆ ಕೊಡಲಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ