ಬೆಂಗಳೂರು,ಅ.9-ಬಹಳ ವರ್ಷಗಳ ನಂತರ ಕುಂದಾನಗರಿ ಬೆಳಗಾವಿಯಲ್ಲಿ ನಡೆಯುತ್ತಿದ್ದ ಚಳಿಗಾಲದ ಅಧಿವೇಶನಕ್ಕೆ ಬ್ರೇಕ್ ಬಿದ್ದಿದೆ.
ರಾಜ್ಯದಲ್ಲಿ ಜೆಡಿಎಸ್- ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ರಚನೆಯಾದ ನಂತರ ಅಂದಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮರಾಠಿಗರ ಪ್ರಾಬಲ್ಯಕ್ಕೆ ಕಡಿವಾಣ ಹಾಕಲು ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದರು.
ನಂತರ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬೆಳಗಾವಿಯಲ್ಲಿ ಪ್ರತಿವರ್ಷ ಅಧಿವೇಶನ ನಡೆಸಲು ಅನುಕೂಲವಾಗುವಂತೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಹಲಗಾ-ಬಸ್ತೀವಾಡದಲ್ಲಿ ಸುವರ್ಣ ಸೌಧ ನಿರ್ಮಾಣ ಮಾಡಿತು.
2006 ರಿಂದ 2018 ರವರೆಗೂ ಚಳಿಗಾಲದ ಅಧಿವೇಶನವನ್ನು ನವೆಂಬರ್ ಇಲ್ಲವೇ ಡಿಸೆಂಬರ್ ತಿಂಗಳಲ್ಲಿ 10 ದಿನಗಳ ಕಾಲ ಚಾಚೂತಪ್ಪದೆ ನಡೆಸಲಾಗುತ್ತಿತ್ತು.ಆದರೆ, ರಾಜ್ಯದಲ್ಲಿ ಕಳೆದ ಆಗಸ್ಟ್ – ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಆಪಾರ ಪ್ರಮಾಣದ ನಷ್ಟ ಉಂಟಾಗಿದೆ.
ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಬೆಳಗಾವಿ, ಚಿಕ್ಕೋಡಿ, ಹುಬ್ಬಳ್ಳಿ-ಧಾರವಾಡ, ಹಾವೇರಿ, ಗದಗ, ಮುಂಬೈ ಕರ್ನಾಟಕದ ಯಾದಗಿರಿ, ಬೀದರ್, ರಾಯಚೂರು ಮತ್ತಿತರ ಕಡೆ ಭಾರೀ ಪ್ರಮಾಣದ ನೆರೆ ಹಾವಳಿ ಉಂಟಾಗಿದೆ.
ಮನೆ, ಆಸ್ತಿ, ಜಾನುವಾರು ಸೇರಿದಂತೆ ಎಲ್ಲವನ್ನು ಕಳೆದುಕೊಂಡು ಸಂತ್ರಸ್ತರು ದಿಕ್ಕು ಕಾಣದೆ ಆಕಾಶದತ್ತ ಮುಖ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಅದರಲ್ಲೂ ಬೆಳಗಾವಿಯಲ್ಲಿ ಅಧಿವೇಶನ ನಡೆಸಿದರೆ ಪ್ರತಿಭಟನೆಯ ಕಾವು ತಟ್ಟುತ್ತದೆ ಎಂಬ ಎಚ್ಚರಿಕೆ ಹಿನ್ನೆಲೆಯಲ್ಲಿ ಸರ್ಕಾರ ಸುಮಾರು 13 ವರ್ಷಗಳ ನಂತರ ಬೆಳಗಾವಿಯಲ್ಲಿ ಅಧಿವೇಶನ ನಡೆಸದಿರಲು ತೀರ್ಮಾನಿಸಿತು.
ಒಂದು ವೇಳೆ ಅಧಿವೇಶನ ನಡೆಸಿದರೆ ಕಬ್ಬು ಬೆಳೆಗಾರರು, ಸಂತ್ರಸ್ತರು, ರೈತರು, ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಸಜ್ಜಾಗಿದ್ದರು. ಇದನ್ನೇ ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಆಡಳಿತ ಪಕ್ಷಗಳ ವಿರುದ್ದ ಮುಗಿಬೀಳಲು ಸಜ್ಜಾಗಿದ್ದವು.
ಇದರ ಉಸಾಬರಿಯೇ ಬೇಡ ಎಂಬ ಕಾರಣಕ್ಕೆ ಅಧಿವೇಶನವನ್ನು ಸುವರ್ಣಸೌಧದ ಬದಲಿಗೆ ಬೆಂಗಳೂರಿನಲ್ಲಿ ನಡೆಸಲು ಮುಂದಾಯಿತು.