ಬೆಂಗಳೂರು, ಅ.7- ನೈಸ್ ರಸ್ತೆಯಲ್ಲಿ ಉಂಟಾಗಿರುವ ಗುಂಡಿಗಳನ್ನು ತ್ವರಿತವಾಗಿ ಮುಚ್ಚಲು ಸೂಚಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ತಿಳಿಸಿದರು.
ತುಮಕೂರು ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿವರೆಗಿನ ನೈಸ್ ರಸ್ತೆಯಲ್ಲಿ ಪ್ರಯಾಣಿಸಿ ರಸ್ತೆಯ ಗುಣಮಟ್ಟವನ್ನು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಉದ್ಯಮಿಗಳೊಂದಿಗೆ ಸಂವಾದÉ ನಡೆಸಿದ ಸಂದರ್ಭದಲ್ಲಿ ನೈಸ್ ರಸ್ತೆ ಬಗ್ಗೆ ದೂರುಗಳು ವ್ಯಕ್ತವಾಗಿದ್ದವು. ಹೀಗಾಗಿ ಖುದ್ದು ಪರಿಶೀಲನೆ ಮಾಡಲು ನೈಸ್ ರಸ್ತೆ ವೀಕ್ಷಣೆ ಮಾಡಲಾಗಿದೆ ಎಂದರು.
ತಕ್ಷಣವೇ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವಂತೆ ನೈಸ್ ಸಂಸ್ಥೆಗೆ ಸೂಚಿಸಿದ್ದು, ಈಗಾಗಲೇ ಮೂರು ಏಜೆನ್ಸಿಗಳ ಮೂಲಕ ರಸ್ತೆ ಗುಂಡಿ ಮುಚ್ಚುವ ಕಾರ್ಯ ನಡೆಯುತ್ತಿದೆ.ಆದರೂ ಇನ್ನೂ ಕೆಲವು ಗುಂಡಿಗಳಿದ್ದು, ಶೀಘ್ರದಲ್ಲೇ ಮುಚ್ಚುವಂತೆ ಸೂಚಿಸಲಾಗಿದೆ.ದುಸ್ಥಿತಿಯಲ್ಲಿರುವ ರಸ್ತೆಯನ್ನು ಸರಿಪಡಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ ಹಾಗೂ ಬನಶಂಕರಿ ಕಡೆಗೆ ತೆರಳುವ ಕನಕಪುರ ರಸ್ತೆ ಜಂಕ್ಷನ್ಗಳಲ್ಲಿ ವಾಹನಗಳ ಆಗಮನ, ನಿರ್ಗಮನದ ಸಮಸ್ಯೆ ಇದೆ. ಆ ಸಮಸ್ಯೆ ಸರಿಪಡಿಸುವಂತೆಯೂ ಸೂಚಿಸಲಾಗಿದೆ.ಸರ್ಕಾರ ಪಾರದರ್ಶಕವಾಗಿದ್ದು, ಜನಪರವಾಗಿ ಕೆಲಸ ಮಾಡಲಿದೆ.ಜನರಿಗೆ ಆಗುತ್ತಿರುವ ಅಡೆತಡೆಗಳನ್ನು ನಿವಾರಣೆ ಮಾಡುವಂತೆ ಸೂಚಿಸಲಾಗಿದೆ. ಈ ವಿಚಾರದಲ್ಲಿ ಸರ್ಕಾರ ಮಡಿವಂತಿಕೆ ಮಾಡುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಕೃಷ್ಣಪ್ಪ ಹಾಗೂ ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿ, ಸಂಬಂಧಪಟ್ಟ ಅಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.