ಸಿದ್ದರಾಮಯ್ಯ ಯಾವ ಸೀಮೆಯ ಹಿಂದುಳಿದ ವರ್ಗದ ನಾಯಕ-ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ

Varta Mitra News

ಬೆಂಗಳೂರು, ಅ.4-ಜಾತಿ ಜನಗಣತಿ ವರದಿಯನ್ನು  ಬಿಡುಗಡೆ ಮಾಡದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಸೀಮೆಯ ಹಿಂದುಳಿದ ವರ್ಗದ ನಾಯಕ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ  ಅವರ ಅಧಿಕಾರಾವಧಿಯಲ್ಲಿ ಜಾತಿ ಜನಗಣತಿ ವರದಿಯನ್ನು ಸಿದ್ಧಪಡಿಸಲಾಗಿತ್ತು. ಇದಕ್ಕಾಗಿ 222 ಕೋಟಿ ರೂ.ಖರ್ಚು ಮಾಡಲಾಗಿತ್ತು.ವರದಿ ಸಿದ್ಧಗೊಂಡ ನಂತರ ಇವರು ಯಾವ ಕಾರಣಕ್ಕಾಗಿ ಬಿಡುಗಡೆ ಮಾಡಲಿಲ್ಲ ಎಂದು ಪ್ರಶ್ನೆ ಮಾಡಿದರು.

ರಾಜ್ಯ ಸರ್ಕಾರ ಜಾತಿ ಜನಗಣತಿಗೆ 190 ಕೋಟಿ ಹಾಗೂ ಕೇಂದ್ರ ಸರ್ಕಾರ 22 ಕೋಟಿ ಹಣ ನೀಡಿತ್ತು. ಸಿಬ್ಬಂದಿಗಾಗಿಯೇ 150 ಕೋಟಿ ರೂ.ಖರ್ಚು ಮಾಡಲಾಗಿದೆ.ವರದಿ ಸಿದ್ಧವಾದರೂ ಯಾವ ಕಾರಣಕ್ಕಾಗಿ ಬಿಡುಗಡೆ ಮಾಡಿಲ್ಲ. ಈಗ ಈ ವರದಿಯನ್ನು ಅನುಷ್ಠಾನ ಮಾಡುವಂತೆ ಬಿಜೆಪಿ ಸರ್ಕಾರಕ್ಕೆ ಒತ್ತಡ ಹಾಕುವುದು ಎಷ್ಟರಮಟ್ಟಿಗೆ ಸರಿ ಎಂದು ಹೇಳಿದರು.

ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ತಕ್ಷಣವೇ ಪರಿಹಾರ ಬಿಡುಗಡೆ ಮಾಡಬೇಕು, ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ವಿಳಂಬ ಮಾಡುವುದು ಸರಿಯಲ್ಲ. ನಮ್ಮ ಜನರು ಕಷ್ಟದಲ್ಲಿರುವಾಗ ಸ್ಪಂದಿಸುವುದು ಚುನಾಯಿತ ಸರ್ಕಾರದ ಪ್ರಥಮ ಕರ್ತವ್ಯ ಎಂದು ಹೇಳಿದರು.

ರಾಜ್ಯದ ವಸ್ತುಸ್ಥಿತಿಯನ್ನು ಕೇಂದ್ರ ಸರ್ಕಾರಕ್ಕೆ  ಸಂಪೂರ್ಣ ಮನವರಿಕೆ ಮಾಡಿಕೊಡಲಾಗಿದೆ. ಗೃಹ ಸಚಿವರು, ಹಣಕಾಸು ಸಚಿವರು ಹಾಗೂ ಉನ್ನತ ಅಧಿಕಾರಿಗಳ ತಂಡ ರಾಜ್ಯಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿದೆ.ಆದರೆ ಪರಿಹಾರ ಬಿಡುಗಡೆ ಮಾಡದಿರುವುದಕ್ಕೆ ಜನರಲ್ಲಿ ಅಸಮಾಧಾನವಿದೆ.ಇನ್ನು ಮೂರ್ನಾಲ್ಕು ದಿನಗಳಲ್ಲಿ ಹಣ ಬಿಡುಗಡೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯರಪ್ಪ ಅವರು ನನ್ನನ್ನು ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ.ಈ ಹುದ್ದೆಯಲ್ಲಿರುವವರೆಗೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು.

ವಿವಿಧ ಇಲಾಖೆಗಳಲ್ಲಿ ಅಭಿವೃದ್ಧಿಗಿಂತ ಅನಗತ್ಯ ದುಂದುವೆಚ್ಚಗಳಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ.ಇದಕ್ಕೆ ಕಡಿವಾಣ ಹಾಕಲು ನಾನು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದ್ದೇನೆ. ಕೆಲವರ ಸ್ವಾರ್ಥಕ್ಕಾಗಿ ಸರ್ಕಾರದ ಹಣ ದುರುಪಯೋಗವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂಪನ್ಮೂಲ ಕ್ರೋಢೀಕರಣಕ್ಕೆ ಒತ್ತು ಕೊಡುವುದು ನನ್ನ ಮೊದಲ ಆದ್ಯತೆ.ಕೇಂದ್ರ ಸರ್ಕಾರದ ಯೋಜನೆಗಳು ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿ ಅನುಷ್ಠಾನವಾಗಿದೆ. ವಿಳಂಬವಾಗಲು ಕಾರಣವೇನು ಎಂಬುದು ಸೇರಿದಂತೆ  ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ ಎಂದು ಹೇಳಿದರು.

ಯೋಜನಾ ಆಯೋಗವನ್ನು ಪುನರ್ ರಚಿಸಿ ತನಿಖೆ ಮಾಡುವಂತೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತೇನೆ. ಯೋಜನಾ ಆಯೋಗಕ್ಕೆ ಹೊಸ ಕಾಯಕಲ್ಪ ನನ್ನ ಮುಖ್ಯ ಉದ್ದೇಶ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ