ಬೆಳಗಾವಿ, ಅ.4- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಬೆಳಗ್ಗೆ ಅತಿಥಿ ಗೃಹದಲ್ಲಿ ಜನರ ಅಹವಾಲು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ರೈತರು ಹಾಗೂ ಮಹಿಳೆಯರು ಪ್ರತಿಭಟನೆ ಕೈಗೊಂಡು ಶೀಘ್ರ ಬೆಳೆ ಪರಿಹಾರ ನೀಡುವಂತೆ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಸಿಎಂ ಯಡಿಯೂರಪ್ಪ ಅಹವಾಲು ಸ್ವೀಕಾರ ಕಾರ್ಯಕ್ರಮವನ್ನು ಅರ್ಧಕ್ಕೆ ಮೊಟಕುಗೊಳಿಸಿ ಅಲ್ಲಿಂದ ತೆರಳಲು ಅಣಿಯಾಗುತ್ತಿದ್ದಂತೆ ರೈತರು ಹಾಗೂ ಮಹಿಳೆಯರು ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದ ವೇಳೆ ಪೆÇಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿದೆ.
ನಂತರ ರೈತ ಸಂಘಟನೆಯವರು, ರೈತ ಮಹಿಳೆಯರು ದಿಢೀರ್ ಪ್ರತಿಭಟನೆ ನಡೆಸಿ ರಸ್ತೆತಡೆ ಮಾಡಿದರು.ರಸ್ತೆಯಲ್ಲೇ ಕುಳಿತು ಬೇಕೇ ಬೇಕು ನ್ಯಾಯ ಬೇಕು ಎಂದು ಘೋಷಣೆಗಳನ್ನು ಕೂಗಿದರು.ಮುಖ್ಯಮಂತ್ರಿಗಳ ಕಾರಿನ ಮುಂದೆ ನಿಂತು ಘೇರಾವ್ ಹಾಕುವ ಯತ್ನ ಮಾಡಿದರು.
ಬೆಳೆ ಪರಿಹಾರ ಹಣ ಬಿಡುಗಡೆಗಾಗಿ ಒತ್ತಾಯಿಸಿ ಕಾರಿಗೆ ಮುತ್ತಿಗೆ ಹಾಕುವ ಯತ್ನ ಮಾಡಿದರು.ರೈತ ಸಂಘಟನೆಗಳು, ಮಹಿಳೆಯರ ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆ ಪೆÇಲೀಸರು ಆಗಮಿಸಿ ಪ್ರತಿಭಟನಾಕಾರರನ್ನು ನಿಯಂತ್ರಿಸಿದರು.
ಘೋಷಣೆ ಕೂಗುತ್ತಿದ್ದ 15ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು.ಠಾಣೆಯಲ್ಲೂ ಕೂಡ ಪ್ರತಿಭಟನಾಕಾರರು ಪರಿಹಾರಕ್ಕಾಗಿ ಆಗ್ರಹಿಸಿ ಘೋಷಣೆ ಕೂಗುತ್ತಿದ್ದುದು ಕಂಡುಬಂತು.