ಬೆಂಗಳೂರು, ಅ.4-ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಸಮರ್ಪಕವಾಗಿ ಕೈಗೊಂಡಿಲ್ಲ ಎಂದು ಆರೋಪಿಸಿ ರಾಜ್ಯ ಸರ್ಕಾರದ ವಿರುದ್ಧ ಅ.10 ರಿಂದ ವಿಧಾನಮಂಡಲದ ಅಧಿವೇಶನ ಮುಗಿಯುವವರೆಗೂ ಪ್ರತಿಭಟನೆಯನ್ನು ನಮ್ಮ ಪಕ್ಷದ ವತಿಯಿಂದ ನಡೆಸಲಾಗುವುದು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.10 ರಂದು ಆನಂದ್ರಾವ್ ವೃತ್ತದ ಬಳಿ ಇರುವ ಮಹಾತ್ಮಗಾಂಧಿ ವೃತ್ತದಿಂದ ಫ್ರೀಡಂಪಾರ್ಕ್ವರೆಗೂ ಸರ್ಕಾರದ ಗಮನ ಸೆಳೆಯಲು ಪಾದಯಾತ್ರೆ ನಡೆಸಲಾಗುವುದು. ಪಕ್ಷದ ಮಾಜಿ ಶಾಸಕರು, ಜಿ.ಪಂ, ತಾ.ಪಂ, ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಕಾರ್ಯಕರ್ತರು ಪಾಲ್ಗೊಳ್ಳುವರು.
ನಮ್ಮ ಪಕ್ಷದ ಶಾಸಕರು ಅಧಿವೇಶನದಲ್ಲಿ ಈ ವಿಚಾರದ ಬಗ್ಗೆ ಪ್ರಸ್ತಾಪ ಮಾಡಲಿದ್ದಾರೆ. ವಿಧಾನಸಭೆ ಅಧಿವೇಶನ ಮುಗಿಯುವವರೆಗೂ ಶಾಂತಿಯುತ ಹೋರಾಟ ನಡೆಸಲಾಗುವುದು. ಬಿಜೆಪಿಯಲ್ಲೇ ಸರ್ಕಾರದ ಆಡಳಿತ ವೈಖರಿ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ.
ಪ್ರಮುಖ ಸ್ಥಾನದಲ್ಲಿರುವವರೇ ಈ ವಿಚಾರದ ಬಗ್ಗೆ ಪ್ರಸ್ತಾಪಿಸಿರುವುದು ಹೈಕಮಾಂಡ್ವರೆಗೂ ಹೋಗಿದೆ.ಒಂದೆಡೆ ಪ್ರವಾಹ ಪರಿಸ್ಥಿತಿಯ ಸಂಕಷ್ಟ ಎದುರಿಸುತ್ತಿದ್ದರೆ, ಮತ್ತೊಂದೆಡೆ ಮಳೆ ಕೊರತೆಯಿಂದ ಕುಡಿಯುವ ನೀರಿಗೂ ತೊಂದರೆ ಎದುರಾಗಿದೆ.ನೆರೆ-ಬರ, ನೆರೆ ಪರಿಹಾರ, ರೈತರ ಬೆಳೆ ಸಾಲ ಮನ್ನಾ, ಋಣಮುಕ್ತ ಕಾಯ್ದೆ ಅನುಷ್ಠಾನ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಸದನದ ಒಳ-ಹೊರಗೆ ಹೋರಾಟ ನಡೆಸಲಿದ್ದೇವೆ ಎಂದರು.
ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸಿ ಜನರ ಮುಂದಿಡಲಾಗುವುದು.ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಸರಿಯಾದ ಮಾಹಿತಿ ನೀಡಿಲ್ಲವೆಂದು ಕೇಂದ್ರ ಸಂಪುಟ ನೆರೆ ಪರಿಹಾರ ಕುರಿತು ಮನವಿ ವಾಪಸ್ ಕಳುಹಿಸಿದೆ ಎಂಬುದನ್ನು ಮಾಧ್ಯಮದಲ್ಲಿ ಗಮನಿಸಿದ್ದೇನೆ. ಬಿಹಾರದಿಂದ -ಕೇರಳದವರೆಗೂ ಹಲವು ರಾಜ್ಯಗಳಲ್ಲಿ ಭೀಕರ ಅತಿವೃಷ್ಟಿ ಉಂಟಾಗಿದೆ. ಬೆಳೆ, ಪ್ರಾಣಹಾನಿಯಾಗಿದೆ.ಆದರೂ ಕೇಂದ್ರ ಮಧ್ಯಂತರ ಪರಿಹಾರ ನೀಡಿಲ್ಲ.
ನೆರೆ ಬಂದ ಒಂದು ವಾರದಲ್ಲೇ ಪ್ರಧಾನಿಗೆ ಪತ್ರ ಬರೆದು 5000 ಸಾವಿರ ಕೋಟಿ ನೆರವಿಗೆ ಕೋರಲಾಗಿತ್ತು.ಆದರೆ ನಕಾರ ಅಥವಾ ಸಕಾರಾತ್ಮಕ ಉತ್ತರ ಬರಲಿಲ್ಲ. ಪ್ರಧಾನಿಗೆ ಬಿಡುವಿಲ್ಲದಿರಬಹುದು. ವಿದೇಶದಲ್ಲಿ 7 ವಾರ ಕಳೆದರೂ ಎಂದು ಹೇಳುವುದಿಲ್ಲ. ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳುವುದು ಸಹಜ.ಒಂದೇ ಒಂದು ರಾಜ್ಯದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿಲ್ಲ. ಬಿಹಾರದ ವಿಚಾರದಲ್ಲಿ ಟ್ವೀಟ್ ಮಾಡಿದ್ದನ್ನು ಬಿಟ್ಟರೆ ಬೇರೆ ನೆರವು ನೀಡಿಲ್ಲ ಎಂದು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಐದು ತಿಂಗಳ ಲೇಖಾನುದಾನ ಪಡೆಯಲು 3 ದಿನ ಅಧಿವೇಶನ ಕರೆಯಲಾಗಿದೆ. ಕನಿಷ್ಠ ಒಂದು ವಾರವಾದರೂ ಅಧಿವೇಶನ ಕರೆಯಬೇಕು. ಈಗ ಮಹಾರಾಷ್ಟ್ರ , ಹರಿಯಾಣದಲ್ಲಿ ಇತರೆ ಪಕ್ಷಗಳ ಮುಖಂಡರು ಬಿಜೆಪಿಯತ್ತ ವಲಸೆ ಹೋಗುತ್ತಿದ್ದಾರೆ. ಇದನ್ನು ರಾಜಕೀಯ ಸ್ವಾರ್ಥ ಎಂದು ಕರೆಯಲೇ ಎಂದು ಪ್ರಶ್ನಿಸಿದರು.
ಪಕ್ಷಾಂತರಿಗಳಿಗೆ ದೊಡ್ಡ ಹುದ್ದೆ ಅಥವಾ ಎಲ್ಲರಿಗೂ ಸ್ಪರ್ಧಿಸಲು ಟಿಕೆಟ್ ಸಿಗುತ್ತದೆಯೇ ಎಂದ ಅವರು, ದೇಶದ ರಾಜಕೀಯ ಈ ಸ್ಥಿತಿಗೆ ಬಂತಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆಟೋಮೊಬೈಲ್, ತಯಾರಿಕಾ ವಲಯದಲ್ಲಿ ಕುಸಿತವಾಗಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ ಎಂದರು.