
ಬೆಂಗಳೂರು, ಅ.3-ಯಾವುದೇ ಸಹಾಯ ಮಾಡದ ಸಂಸದರನ್ನು ಆಯ್ಕೆ ಮಾಡಿರುವುದು ನಮ್ಮ ತಪ್ಪು. ಇದಕ್ಕಾಗಿ ನಮಗೆ ನಾವು ಚಪ್ಪಲಿಯಲ್ಲಿ ಹೊಡೆದುಕೊಳ್ಳಬೇಕು ಎಂದು ನಿವೃತ್ತ ಪೆÇಲೀಸ್ ಅಧಿಕಾರಿ ಶಂಕರಬಿದರಿ ಇಂದಿಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಅನ್ಯಾಯ ಖಂಡಿಸಿ ನಗರದಲ್ಲಿಂದು ನಡೆದ ಬೃಹತ್ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಉತ್ತರ ಕರ್ನಾಟಕದ ಜನ ಪ್ರವಾಹದಿಂದ ನಲುಗಿ ಹೋಗಿದ್ದಾರೆ.ಪ್ರವಾಹ ಪರಿಸ್ಥಿತಿ ನಂತರ 60 ದಿನ ಕಳೆದರೂ ಕೇಂದ್ರದಿಂದ ಯಾವುದೇ ಪರಿಹಾರ ಬಂದಿಲ್ಲ. ನಮ್ಮ ಕೇಂದ್ರ ಸರ್ಕಾರ ಏನು ಮಾಡುತ್ತಿದೆ ಎಂದು ಕಿಡಿಕಾರಿದರು.
ರಾಜ್ಯವನ್ನು ಪ್ರತಿನಿಧಿಸುವ ಸಂಸದರು ಏನು ಮಾಡುತ್ತಿದ್ದಾರೆ ?ಯಾವುದೇ ಸಹಾಯ ಮಾಡದ ಇವರನ್ನು ಆಯ್ಕೆ ಮಾಡಿದ್ದು ನಮ್ಮದೇ ತಪ್ಪು, ಅಂತಹವರನ್ನು ಆಯ್ಕೆ ಮಾಡಿದ ತಪ್ಪಿಗೆ ನಾವು ಇಂದು ಈ ಪರಿಸ್ಥಿತಿ ಎದುರಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕದ ಜನ ಮುಗ್ಧರು, ದೈವ ಭಕ್ತರು.ಕಳೆದ 70 ವರ್ಷಗಳ ಅವಧಿಯಲ್ಲಿ ಈ ರೀತಿಯ ಪ್ರವಾಹವನ್ನು ಯಾವತ್ತೂ ನೋಡಿಲ್ಲ. ಮನೆ, ಮಠ ಕಳೆದುಕೊಂಡು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.
ಜನರಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಇದೇ ವೇಳೆ ಪ್ರತಿಭಟನಾಕಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಜಾಜಿನಗರದ ಮೈದಾನದಿಂದ ಹೊರಟ ಪ್ರತಿಭಟನಾ ರ್ಯಾಲಿ ನಗರದ ಫ್ರೀಡಂಪಾರ್ಕ್ನಲ್ಲಿ ಜಮಾವಣೆಗೊಂಡು ಸರ್ಕಾರದ ವಿಳಂಬ ನೀತಿಯನ್ನು ಖಂಡಿಸಿತು.