ಬೆಂಗಳೂರು, ಅ.3-ಎಲ್ಲಾ ಅಧಿಕಾರಿಗಳು ಸಭೆ ನಡೆಸಿ ಸಭಾ ನಡವಳಿಕೆಯಂತೆ ಕರ್ತವ್ಯ ನಿರ್ವಹಿಸಬೇಕು.ಇಲ್ಲದಿದ್ದರೆ ಅಂತಹ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ನೂತನ ಮೇಯರ್ ಗೌತಮ್ಕುಮಾರ್ ಇಂದಿಲ್ಲಿ ಎಚ್ಚರಿಕೆ ನೀಡಿದರು.
ಮೇಯರ್ ಆಗಿ ಅಧಿಕಾರ ವಹಿಸಿಕೊಂಡ ನಂತರ ಆಯುಕ್ತರು, ನಾಲ್ವರು ವಿಶೇಷ ಆಯುಕ್ತರು ಹಾಗೂ ವಲಯ ಜಂಟಿ ಆಯುಕ್ತರೊಂದಿಗೆ ನಡೆಸಿದ ಮೊದಲ ಸಭೆಯಲ್ಲಿ ಗೌತಮ್ಕುಮಾರ್ ಈ ಎಚ್ಚರಿಕೆ ನೀಡಿದರು.
ಆಯಾ ವಲಯಗಳ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಹಾಯಕ ಅಭಿಯಂತರರು ಮತ್ತಿತರ ಅಧಿಕಾರಿಗಳು ಜಂಟಿ ಆಯುಕ್ತರೊಂದಿಗೆ ಸಭೆ ನಡೆಸಿ, ಸಭಾ ನಡವಳಿಕೆ ಪ್ರಕಾರವೇ ಕರ್ತವ್ಯ ನಿರ್ವಹಿಸಬೇಕೆಂದು ಸೂಚಿಸಿದರು.
ಸಭಾ ನಡವಳಿಕೆಗಳನ್ನು ಜಂಟಿ ಆಯುಕ್ತರಿಗೆ ನೀಡಬೇಕು.ಜಂಟಿ ಆಯುಕ್ತರು ಈ ಅಂಶವನ್ನು ನಾಲ್ಕು ವಿಶೇಷ ಆಯುಕ್ತರ ಗಮನಕ್ಕೆ ತರಬೇಕು. 15 ದಿನಗಳಿಗೊಮ್ಮೆ ನಾನು ವಿಶೇಷ ಆಯುಕ್ತರೊಂದಿಗೆ ಸಭೆ ನಡೆಸುತ್ತೇನೆ. ಇದನ್ನೆಲ್ಲ ಗಮನಿಸುತ್ತೇನೆ. ನಡವಳಿಕೆಯಂತೆ ಕರ್ತವ್ಯ ನಿರ್ವಹಿಸದಿದ್ದರೆ ನೋಟಿಸ್ ನೀಡಲಾಗುತ್ತದೆ ಎಂದು ಎಚ್ಚರಿಸಿದರು.
ಏಕಗವಾಕ್ಷಿ ಯೋಜನೆಯಡಿ ಜನರ ಸಮಸ್ಯೆ ಆಲಿಸಿ ಜನರಿಗೆ ಶೀಘ್ರ ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.ಎಲ್ಲಾ ಎಂಟು ವಲಯಗಳಲ್ಲೂ ಪ್ರತಿನಿತ್ಯ ರಾತ್ರಿ ಪ್ರಹರಿ ವಾಹನಗಳು ಗಸ್ತು ತಿರುಗಬೇಕು.ಆಯಾ ವಲಯ ಅಧಿಕಾರಿಗಳು ಇದರ ಉಸ್ತುವಾರಿ ನೋಡಿಕೊಳ್ಳಬೇಕೆಂದು ಸೂಚಿಸಿದರು.
ಬಿಬಿಎಂಪಿ ಕೇಂದ್ರ ಕಚೇರಿಯನ್ನು ಇಂದಿನಿಂದಲೇ ಪ್ಲಾಸ್ಟಿಕ್ ಮುಕ್ತ ಮಾಡಬೇಕು. ಯಾವುದೇ ಸಭೆ, ಸಮಾರಂಭ ಇರಲಿ ಪ್ಲಾಸ್ಟಿಕ್ ವಸ್ತುಗಳನ್ನು ತರಬಾರದು, ನನಗೆ ಅಭಿನಂದನೆ ಸಲ್ಲಿಸಲು ಬರುವವರು ಹಾರ, ತುರಾಯಿ, ಗಿಫ್ಟ್ ಏನನ್ನೂ ತರುವಂತಿಲ್ಲ. ಒಟ್ಟಾರೆ ನನ್ನ ಅವಧಿಯಲ್ಲಿ ಪಾರದರ್ಶಕ ಆಡಳಿತ ನೀಡಬೇಕು. ಅಧಿಕಾರಿಗಳು ಜನಸ್ನೇಹಿಯಾಗಿ ಕೆಲಸ ನಿರ್ವಹಿಸಬೇಕೆಂದು ಮೇಯರ್ ಸೂಚಿಸಿದರು.
ಉಪಮೇಯರ್ ಮೋಹನ್ರಾಜ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.