ಅತ್ಮಾಹುತಿ ಬಾಂಬರ್‌ಗಳು ನುಸುಳಿರುವ ಶಂಕೆ: ದಿಲ್ಲಿಯಲ್ಲಿ ರೆಡ್ ಅಲರ್ಟ್

ಹೊಸದಿಲ್ಲಿರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ 4-5 ಆತ್ಮಾಹುತಿ ಬಾಂಬರ್‌ಗಳು ನುಗ್ಗಿದ್ದಾರೆಂಬ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ಬುಧವಾರ ರಾತ್ರಿಯಿಂದಲೇ ದಿಲ್ಲಿ ಸೇರಿದಂತೆ 9 ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಎ’ ವರ್ಗದ ಗುಪ್ತಚರ ಮಾಹಿತಿ ಲಭ್ಯವಾದ ಬಳಿಕ ದಿಲ್ಲಿ ಪೊಲೀಸರು ಅಲರ್ಟ್ ಆಗಿದ್ದು, ನಗರದೆಲ್ಲೆಡೆ ಹದ್ದಿನ ಕಣ್ಣು ಇರಿಸಿದ್ದಾರೆ. ‘ಎ’ ವರ್ಗದ ಗುಪ್ತಚರ ಮಾಹಿತಿ ಅತ್ಯಂತ ವಿಶ್ವಾಸಾರ್ಹವೆಂದು ಪರಿಗಣಿಸಲಾಗುತ್ತದೆ. ಈಗಾಗಲೇ ದಿಲ್ಲಿ ಪೊಲೀಸರು ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ವಿಧ್ವಂಸಕ ಕೃತ್ಯ ಎಸಗಲು ದಿಲ್ಲಿಗೆ ಪ್ರವೇಶಿಸಿರುವ ಭಯೋತ್ಪಾದಕರು ಪಾಕಿಸ್ತಾನ ಮೂಲದ ಜೈಷೆ ಮಹೊಮ್ಮದ್ ಸಂಘಟನೆ ಜತೆ ಸಂಬಂಧ ಹೊಂದಿದ್ದಾರೆಂದು ಮೂಲಗಳು ತಿಳಿಸುತ್ತಿವೆ.
ಕಣಿವೆ ನಾಡು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ರದ್ದತಿಯಿಂದ ಹತಾಶರಾಗಿರುವ ಉಗ್ರರು, ರಾಷ್ಟ್ರ ರಾಜಧಾನಿಯಲ್ಲಿ ದಾಳಿ ನಡೆಸುವ ಮೂಲಕ ಪ್ರತೀಕಾರ ತೀರಿಸಿಕೊಳ್ಳುವ ಸಂಚು ರೂಪಿಸಿದ್ದಾರೆ. ದಿಲ್ಲಿಗೆ ನುಗ್ಗಿರುವ 4-5 ಆತ್ಮಾಹುತಿ ಬಾಂಬರ್‌ಗಳ ಪೈಕಿ ಇಬ್ಬರು ವಿದೇಶಿಯರು ಎಂದು ಹೇಳಲಾಗುತ್ತಿದೆ.
ಗುಪ್ತಚರ ಮಾಹಿತಿ ಅನುಸರಿಸಿ ದಿಲ್ಲಿ ಪೊಲೀಸರ ವಿಶೇಷ ತಂಡ ಬುಧವಾರ ರಾತ್ರಿ ನಗರದ 9 ಸ್ಥಳಗಳಲ್ಲಿ ದಾಳಿ ನಡೆಸಿದ್ದು, ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಗುರಿಯಾಗಿಸಿಕೊಂಡ ದಾಳಿ ನಡೆಸಲು ಪಾಕಿಸ್ತಾನ ಮೂಲದ ಜೈಷೆ ಮಹಮ್ಮದ್ ಉಗ್ರ ಸಂಘಟನೆ ವಿಶೇಷ ತಂಡ ಸಿದ್ಧಪಡಿಸುತ್ತಿದೆ ಎಂದು ಗುಪ್ತಚರ ಇಲಾಖೆ ಸ್ಪೋಟಕ ಮಾಹಿತಿ ನೀಡಿತ್ತು. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ರದ್ದತಿಗೆ ಪ್ರತೀಕಾರವಾಗಿ ಜೈಷೆ ಮಹಮ್ಮದ್ ಭಯೋತ್ಪಾದಕ ಸಂಘಟನೆ ಭಾರೀ ಸಂಚು ರೂಪಿಸುತ್ತಿದೆ ಎಂದು ಭಾರತೀಯ ಗುಪ್ತಚರ ಇಲಾಖೆ ಮೂಲಗಳು ತಿಳಿಸಿದ್ದವು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ