ಬೆಂಗಳೂರು, ಅ.2- ರಾಷ್ಟ್ರಪಿತ ಮಹಾತ್ಮಗಾಂಧೀಜಿ ಅವರ 150 ಮತ್ತು ಮಾಜಿ ಪ್ರಧಾನಿ ಲಾಲ್‍ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆ ಅಂಗವಾಗಿ ಕಾಂಗ್ರೆಸ್ ನಾಯಕರು ಕೆಪಿಸಿಸಿ ಕಚೇರಿಯಿಂದ ಫ್ರೀಡಂಪಾರ್ಕ್‍ವರೆಗೆ ಕಾಲ್ನಡಿಗೆಯಲ್ಲಿ ಸದ್ಭಾವನಾ ಯಾತ್ರೆ ನಡೆಸಿದರು.
ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಂ.ವೀರಪ್ಪಮೊಯ್ಲಿ, ಮಾಜಿ ಡಿಸಿಎಂ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್‍ಖಂಡ್ರೆ, ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಎಚ್.ಕೆ.ಪಾಟೀಲ್, ಜಮೀರ್ ಅಹಮ್ಮದ್‍ಖಾನ್ ಮತ್ತಿತರರು ಯಾತ್ರೆಯಲ್ಲಿ ಭಾಗವಹಿಸಿದ್ದರು.
ಕೆಪಿಸಿಸಿ ಕಚೇರಿಯಿಂದ ಹೊರಟ ಪಾದಯಾತ್ರೆ ಫ್ರೀಡಂಪಾರ್ಕ್‍ವರೆಗೂ ನಡೆದು ಅಲ್ಲಿ ಮಹಾತ್ಮಗಾಂಧೀಜಿಯವರ 150ನೇ ಜನ್ಮ ದಿನಾಚರಣೆ ಅಂಗವಾಗಿ 150 ಶ್ರೀಗಂಧದ ಸಸಿಗಳನ್ನು ಕಾಂಗ್ರೆಸ್ ನಾಯಕರು ನೆಟ್ಟರು ಹಾಗೂ ರಕ್ತದಾನದಲ್ಲಿ ಭಾಗವಹಿಸಿದರು.
ದಾರಿಯುದ್ದಕ್ಕೂ ವಂದೇ ಮಾತರಂ ಘೋಷಣೆ ಕೂಗಿದರಲ್ಲದೆ, ಮಹಾತ್ಮಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ಜೈಕಾರ ಹಾಕಲಾಯಿತು. ಎಲ್ಲಾ ನಾಯಕರು ಶ್ವೇತ ವಸ್ತ್ರಧಾರಿಗಳಾಗಿ, ಗಾಂಧಿ ಟೋಪಿ ಧರಿಸಿ ರ್ಯಾಲಿಯಲ್ಲಿ ಭಾಗವಹಿಸಿದ್ದರು.
ಕೆಪಿಸಿಸಿ ಕಚೇರಿ ಎದುರು ತಾತ್ಕಾಲಿಕವಾಗಿ ಸ್ಥಾಪಿಸಲಾಗಿದ್ದ ಗಾಂಧೀಜಿಯವರ ಪ್ರತಿಕೃತಿಗೆ ಪುಷ್ಪನಮನ ಸಲ್ಲಿಸಿ ಆರಂಭಗೊಂಡ ಸದ್ಭಾವನಾ ಯಾತ್ರೆ ದಾರಿಯುದ್ದಕ್ಕೂ ಅತ್ಯಂತ ಶಿಸ್ತಿನಿಂದ ನಡೆಯಿತು.
ಇತ್ತೀಚೆಗೆ ರಾಜ್ಯ ಚುನಾವಣಾ ಸಮಿತಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಜತೆ ವಾಗ್ವಾದ ನಡೆಸಿದ್ದ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಹಾಗೂ ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಸದ್ಭಾವನಾ ರ್ಯಾಲಿಯಿಂದ ದೂರ ಉಳಿದಿದ್ದರು.
ನಂತರ ನಡೆದ ಸಭೆಯಲ್ಲಿ ಸ್ವಾಗತ ಭಾಷಣ ಮಾಡಿದ ಮುಖಂಡ ವಿ.ಆರ್.ಸುದರ್ಶನ್, ವೇದಿಕೆಯಲ್ಲಿದ್ದ ಪ್ರಮುಖ ನಾಯಕರ ಹೆಸರನ್ನು ಮಾತ್ರ ಹೇಳಿದರು.ಇದರಿಂದ ಅಸಮಾಧಾನಗೊಂಡವರಂತೆ ಕಂಡು ಬಂದ ರಾಮಲಿಂಗಾರೆಡ್ಡಿ ಅವರು ಕಾರ್ಯಕ್ರಮದ ಮಧ್ಯೆಯೇ ಎದ್ದು ಹೋದರು.