
ಬೆಂಗಳೂರು,ಸೆ.30- ಸಂಸದ ಡಿ.ಕೆ.ಸುರೇಶ್ ಅವರಿಗೆ ನೋಟಿಸ್ ಕೊಟ್ಟಿರುವುದರಲ್ಲಿ ಬಿಜೆಪಿಯ ಪಾತ್ರವಿಲ್ಲ ಎಂದು ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ.ಶಿವಕುಮಾರ್ ಅವರ ವಿಚಾರಣೆಯನ್ನು ಜಾರಿ ನಿರ್ದೇಶನಾಲಯ ನಡೆಸುತ್ತಿದೆ. ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳುತ್ತದೆ. ದೇಶದಲ್ಲಿ ಎಲ್ಲರಿಗೂ ಕಾನೂನು ಒಂದೇ ಎಂದು ಹೇಳಿದರು.
ತಾವು ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದಾರೆ. ಹೋರಾಟ ಮಾಡಲಿ. ತಪ್ಪಿತಸ್ಥರಾಗದಿದ್ದರೆ ಆರೋಪದಿಂದ ಹೊರಬರಲಿದ್ದಾರೆ. ಇಡಿ ಹಾಗೂ ಚುನಾವಣಾ ಆಯೋಗದಂತಹ ಸ್ವಾಯತ್ತ ಸಂಸ್ಥೆಗಳ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಬಳಸುವುದಿಲ್ಲ ಎಂದರು.
ಬಿ.ಎಸ್.ಯಡಿಯೂರಪ್ಪ ಅವರ ತಂತಿ ಮೇಲಿನ ನಡಿಗೆ ವಿಷಯವಾಗಿ ಕೇಳಿದ ಪ್ರಶ್ನೆಗೆ , ಅದಕ್ಕೆ ತಾವು ಪ್ರತಿಕ್ರಿಯೆ ನೀಡುವುದಿಲ್ಲ. ಅವರೇ ಉತ್ತರಿಸುತ್ತಾರೆ. ಅವರಿಗೆ ನಾವು ಎಲ್ಲ ರೀತಿಯ ಬೆಂಬಲ ನೀಡಿದ್ದೇವೆ. ನಮ್ಮ ಅವಧಿಯ ಅಧಿಕಾರವನ್ನು ಸಂಪೂರ್ಣವಾಗಿ ನಡೆಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸ್ವಾಮೀಜಿಯ ಟೆಲಿಪೋನ್ ಕದ್ದಾಲಿಕೆ ವಿಷಯದಲ್ಲಿ ನಾವು ಸತ್ಯ ಹೇಳಿದ್ದೇವೆ. ಯಾವುದೇ ವ್ಯಕ್ತಿ, ಪಕ್ಷ ಅಥವಾ ಸರ್ಕಾರದ ಹೆಸರು ಹೇಳಿ ಆಪಾದಾನೆ ಮಾಡಿಲ್ಲ. ಏನೇ ಆದರೂ ಸತ್ಯಾಂಶ ಹೊರಬರಲಿದೆ. ಯಾವುದೇ ಸರ್ಕಾರ ಮಾಡಿದ್ದರೂ ಅಕ್ರಮ ಬಯಲಿಗೆ ಬರಲಿದೆ. ತಪ್ಪು ಮಾಡದಿದ್ದರೆ ಭಯವೇಕೆ ಎಂದು ಪ್ರಶ್ನಿಸಿದರು.
ಉಮೇಶ್ ಕತ್ತಿ ಹೇಳಿಕೆ ಸಂಬಂಧ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ ಅದು ತಮಗೆ ತಿಳಿದಿಲ್ಲ. ಅವರನ್ನೇ ಕೇಳಿ ಎಂದರು.
ನೆರೆ ಹಾಗೂ ಬರಪೀಡಿತ ರಾಜ್ಯಗಳ ಪರಿಹಾರವನ್ನು ದೇಶದ ಐದಾರು ರಾಜ್ಯಗಳಿಗೆ ಕೇಂದ್ರ ನೀಡಬೇಕಿದೆ. ಕೇಂದ್ರದಿಂದ ಸದ್ಯದಲ್ಲೇ ಅನುದಾನ ಬರಲಿದೆ. ಈಗಾಗಲೇ ಸರ್ಕಾರದಿಂದ ಅಗತ್ಯ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು, ಮನೆ ಕಟ್ಟಿಕೊಳ್ಳುವವರಿಗೆ ಒಂದು ಲಕ್ಷ ನೀಡಲಾಗುತ್ತಿದೆ. ಜಿಲ್ಲಾಧಿಕಾರಿಗಳ ಬಳಿ ಸಾಕಷ್ಟು ಹಣವಿದೆ. ಅಗತ್ಯಬಿದ್ದರೆ ಇನ್ನಷ್ಟು ಹಣ ವರ್ಗಾವಣೆ ಮಾಡಲಾಗುವುದು.
ಇತ್ತೀಚೆಗೆ ಬೆಳಗಾವಿಗೆ 200 ಕೋಟಿ ಬಿಡುಗಡೆ ಮಾಡಲಾಗಿದೆ. ಅದೇ ರೀತಿ ಇತರೆ ಜಿಲ್ಲೆಗಳಿಗೂ ಹಣ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.