ಹುಬ್ಬಳ್ಳಿ, ಸೆ.24- ನೆರೆ ಸಂತ್ರಸ್ತರ ನೆರವಿಗೆ ಬರದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಬೆಳಗಾವಿಯಲ್ಲಿಂದು ಬೃಹತ್ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಪಕ್ಷದ ಮುಖಂಡರು ತೀವ್ರ ವಾಗ್ದಾಳಿ ನಡೆಸಿದರು.
ನೀತಿ ಸಂಹಿತೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿಗೆ ಅನುಮತಿ ಸಿಗದ ಹಿನ್ನೆಲೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ವಿವಿಧ ತಾಲೂಕು ಹಾಗೂ ಜಿಲ್ಲೆಗಳಿಂದ ರ್ಯಾಲಿಗಳ ಮೂಲಕ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರು, ಬೆಂಬಲಿಗರು ಸಮಾವೇಶಗೊಂಡು ಸಂತ್ರಸ್ತರಿಗೆ ನೆರವು ನೀಡಬೇಕೆಂದು ಆಗ್ರಹಿಸಿದರು.
ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮುಖಂಡರಾದ ಎಸ್.ಆರ್. ಪಾಟೀಲ್, ಎಂ.ಬಿ.ಪಾಟೀಲ್, ಆನಂದ ನ್ಯಾಮಗೌಡ, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡು ಸರ್ಕಾರನ್ನು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಪ್ರಧಾನಿ ಮೋದಿಯವರಿಗೆ ವಿದೇಶಗಳನ್ನು ಸುತ್ತುವುದಕ್ಕೆ ಸಮಯವಿದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವುದಕ್ಕೆ ಸಮಯವಿಲ್ಲವೇ? ಕರ್ನಾಟಕದ ಬಗ್ಗೆ ಏಕಿಷ್ಟು ನಿರ್ಲಕ್ಷ್ಯ. ರಾಜ್ಯದ ಜನ 25 ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದರೂ ಒಬ್ಬರೂ ಸಹ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಕಾಟಾಚಾರಕ್ಕೆ ಬಂದು ಹೋದರು. ಪ್ರವಾಹ ಬಂದು 45 ದಿನಗಳಾದರೂ ಒಂದು ಬಿಡಿಗಾಸಿನ ನೆರವು ಸಿಕ್ಕಿಲ್ಲ ಎಂದರು.
ಸಂಸದ ತೇಜಸ್ವಿ ಸೂರ್ಯ ಅವರು, ರಾಜ್ಯಕ್ಕೆ ಕೇಂದ್ರದ ನೆರವಿನ ಅಗತ್ಯವಿಲ್ಲ ಎಂದು ಹೇಳುತ್ತಾರೆ. ಅಪ್ರಬುದ್ಧ ರಾಜಕಾರಣಿ; ಸಂವಿಧಾನವನ್ನು ಓದಿ ತಿಳಿದುಕೊಳ್ಳಲಿ ಎಂದು ಹೇಳಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಈ ರಾಜ್ಯ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ. ಅವರನ್ನು ನೋಡಿದರೆ ಅಯ್ಯೋ ಅನಿಸುತ್ತದೆ. ದೆಹಲಿಗೆ ಹೋದರೆ ಅವರು, ಮೋದಿ, ಅಮಿತ್ ಶಾ ಭೇಟಿಯಾಗುವುದಿಲ್ಲ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ನೆರೆಯಿಂದ ರಾಜ್ಯಕ್ಕೆ ಸಾಕಷ್ಟು ಹಾನಿಯಾಗಿದೆ. ಸಂತ್ರಸ್ತರ ಗೋಳು ಕೇಳುವವರಿಲ್ಲ. ರಾಜ್ಯ ಸರ್ಕಾರ ಅನರ್ಹರನ್ನು ಕಾಪಾಡಲು ಮುಂದಾಗಿದೆ ಎಂದರು.
ಶಾಸಕ ಆನಂದ ನ್ಯಾಮೇಗೌಡ ಮಾತನಾಡಿ, ಖಜಾನೆಯಲ್ಲಿ ಹಣವಿದ್ದರೂ ಪರಿಹಾರ ನೀಡುತ್ತಿಲ್ಲ. ಹೃದಯ ಶ್ರೀಮಂತಿಕೆ ಇಲ್ಲದ ಸರ್ಕಾರ. ಬಿಜೆಪಿ ಸಚಿವರು, ಸಂಸದರು ಮನಬಂದಂತೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.