ಹುಬ್ಬಳ್ಳಿ,ಸೆ.24- ಉಪಚುನಾವಣೆಯ 15 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿದೆ. ಪಕ್ಷಾಂತರಿಗಳನ್ನು ಸೋಲಿಸಲು ಜನ ತೀರ್ಮಾನ ಮಾಡಿದ್ದಾರೆ. ಚುನಾವಣೆಗಾಗಿ ನಾವು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಾಂತರಿಗಳನ್ನು ಸೋಲಿಸಲು ಕಾಂಗ್ರೆಸ್ ಪಕ್ಷ ಕೂಡ ಸಜ್ಜಾಗಿದೆ. ಇಂತಹವರಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು. ಇನ್ನೆರಡು ದಿನದಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿ ಪ್ರಚಾರ ನಡೆಸಲಾಗುವುದು ಎಂದು ಹೇಳಿದ ಅವರು, ಎಲ್ಲಾ ಸ್ಥಾನಗಳಲ್ಲಿ ನಾವೇ ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದರಾಮಯ್ಯನವರು ಸಾಕಿದ ಗಿಣಿಗಳು ಹದ್ದಾಗಿ ಕುಕ್ಕಿದವು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಿಸಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿಯವರು ಯಾವ ಪ್ರಜ್ಞೆಯಿಟ್ಟುಕೊಂಡು ಮಾತನಾಡಿದ್ದಾರೋ ಗೊತ್ತಿಲ್ಲ. ಜೆಡಿಎಸ್ನ ಜಿ.ಟಿ.ದೇವೇಗೌಡರೇ ಸ್ವತಃ ಮೂರ್ನಾಲ್ಕು ದಿನಗಳ ಹಿಂದೆ ಕುಮಾರಸ್ವಾಮಿಯವರೇ ಬಿಜೆಪಿಗೆ ಮತ ಹಾಕಿಸುವಂತೆ ಕುಮಾರಸ್ವಾಮಿಯವರ ಮಂತ್ರಿಮಂಡಲದಲ್ಲಿದ್ದವರು ಹೇಳಿದ್ದಾರೆಯೇ ಹೊರತು ಕಾಂಗ್ರೆಸ್ನವರಲ್ಲ. ಇದನ್ನು ನೋಡಿದರೆ ಯಾರದು ನಾಟಕ ಎಂದು ತಿಳಿಯುವುದು. ಜಿ.ಟಿ.ದೇವೇಗೌಡರು ಸತ್ಯ ಹೇಳಿಬಿಟ್ಟಿದ್ದಾರೆ. ಅದನ್ನು ಮರೆಮಾಚಲು ಈ ರೀತಿ ನಾಟಕೀಯವಾಗಿ ಮಾತನಾಡುತ್ತಿದ್ದಾರೆ ಎಂದರು.
ಉಪಚುನಾವಣೆಯಲ್ಲಿ ಕುಮಾರಸ್ವಾಮಿಯವರು ಯಾರನ್ನು ನಿಲ್ಲಿಸುತ್ತಾರೆ ಎಂಬುದು ಗಣನೆಗೆ ಬರುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಜನರು ಕುಟುಂಬ ರಾಜಕಾರಣಕ್ಕೆ ಮತ ಹಾಕುವುದಿಲ್ಲ ಎಂದು ತಿಳಿದಿರುವುದಕ್ಕೆ ಈ ರೀತಿ ಬಹಿರಂಗವಾಗಿ ಕುಟುಂಬ ಸದಸ್ಯರನ್ನು ನಿಲ್ಲಿಸುವುದಿಲ್ಲ ಎಂದು ಹೇಳುತ್ತಿದ್ದಾರೆ.
ಸಮ್ಮಿಶ್ರ ಸರ್ಕಾರ ಕೆಟ್ಟದಾಗಿತ್ತು ಎಂದು ಕುಮಾರಸ್ವಾಮಿಯವರೇ ಒಪ್ಪಿಕೊಂಡಿದ್ದಾರೆ. ಇನ್ನು ನಾನೇನು ಹೇಳಲಿ ಎಂದರು.
ಸಾಲಮನ್ನಾ ವಿಚಾರವಾಗಿ ರೈತನೊಬ್ಬ ನಮ್ಮದು ಇನ್ನೂ ಸಾಲಮನ್ನಾ ಆಗಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ನಾನು ಮಾಡಿದ್ದು ಸಾಲಮನ್ನಾ ಸರಿಯಾಗಿದೆ. ಕುಮಾರಸ್ವಾಮಿ ಮಾಡಿರುವುದು ಸರಿಯಾಗಿಲ್ಲ ಎಂದು ಪರೋಕ್ಷವಾಗಿಯೇ ಅಸಮಾಧಾನ ವ್ಯಕ್ತಪಡಿಸಿದರು.
ವಿಶ್ವನಾಥ್ ಅವರ ಸಿಡಿ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನನಗೇನು ಗೊತ್ತಿಲ್ಲ; ಈ ಬಗ್ಗೆ ಸಾ.ರಾ ಮಹೇಶ್ ಅವರನ್ನೇ ಕೇಳಿ ಎಂದರು.