ಬೆಂಗಳೂರು,ಸೆ.24- ಸರ್ಕಾರ ರಚನೆಗೆ ಕಾರಣರಾದ ಅನರ್ಹರಿಗೆ ಯಾವುದೇ ಕಾರಣಕ್ಕೂ ನಾನು ಕೊಟ್ಟ ಮಾತಿಗೆ ತಪ್ಪುವುದಿಲ್ಲ. ವರಿಷ್ಠರ ಬಳಿಯೂ ಇದನ್ನೇ ಹೇಳಿದ್ದೇನೆ. ನನ್ನ ಮೇಲೆ ಎಷ್ಟೇ ಒತ್ತಡ ಹಾಕಿ ಇಲ್ಲವೇ ಬ್ಲಾಕ್ಮೇಲ್ ಮಾಡಿದರೂ ಸರಿಯೇ ನನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ…
ಇದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ನೀಡುವಂತೆ ಒತ್ತಡ ಹಾಕುತ್ತಿರುವವರಿಗೆ ರವಾನಿಸಿದ ಸ್ಪಷ್ಟ ಸಂದೇಶ.
ಅನರ್ಹರಾದವರಿಗೆ ಉಪಚುನಾವಣೆಯಲ್ಲಿ ಟಿಕೆಟ್ ನೀಡಿ ಗೆಲ್ಲಿಸಿ ನಂತರ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು. ಇತ್ತೀಚೆಗೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮತ್ತು ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದ ವೇಳೆ ಇದೇ ಮಾತನ್ನು ಹೇಳಿದ್ದೇನೆ. ನಮ್ಮನ್ನು ನಂಬಿ ಬಂದವರಿಗೆ ವಿಷ ಕೊಡಲು ಸಾಧ್ಯವೇ ಎಂದು ಬಿಎಸ್ವೈ ಪ್ರಶ್ನಿಸಿದ್ದಾರೆ.
ಇದು ಅತ್ಯಂತ ವಿಷಮ ಪರಿಸ್ಥಿತಿ. ಕಾಂಗ್ರೆಸ್-ಜೆಡಿಎಸ್ನಿಂದ ಅನರ್ಹರಾದವರಿಗೆ ಟಿಕೆಟ್ ನೀಡಲೇಬೇಕು. ರಾಜೀನಾಮೆ ನೀಡುವ ಮುನ್ನ ಅವರಿಗೆ ಮಂತ್ರಿ ಸ್ಥಾನ ನೀಡುವ ವಾಗ್ದಾನ ಮಾಡಲಾಗಿತ್ತು. ಈಗ ಮಾತಿಗೆ ತಪ್ಪಿದರೆ ವಚನಭ್ರಷ್ಟರಾಗುತ್ತೇವೆ ಎಂದು ಬಿಎಸ್ವೈ ಹೇಳಿದ್ದಾರೆ.
ಇಂದು ತಮ್ಮ ನಿವಾಸದಲ್ಲಿ ಹೊಸಕೋಟೆ ವಿಧಾನಸಭಾ ಕ್ಷೇತ್ರದಿಂದ ಸಂಸದ ಬಿ.ಎನ್.ಬಚ್ಚೇಗೌಡ ತಮ್ಮ ಪುತ್ರ ಶರತ್ ಬಚ್ಚೇಗೌಡಗೆ ಟಿಕೆಟ್ ನೀಡಬೇಕೆಂದು ಬೆಂಬಲಿಗರ ಮೂಲಕ ಶಕ್ತಿ ಪ್ರದರ್ಶಿಸಿದರು.
ಈ ವೇಳೆ ಮುಖಂಡರ ಮನವೊಲಿಸುವ ಪ್ರಯತ್ನ ಮಾಡಿದ ಯಡಿಯೂರಪ್ಪ ನಮ್ಮನ್ನು ನಂಬಿ ಬಂದವರಿಗೆ ಟಿಕೆಟ್ ಕೊಡಲು ಸಾಧ್ಯವಾಗದಿದ್ದರೆ ವಿಷ ಕೊಟ್ಟುಬಿಡಿ ಎಂದು ತುಸು ಅಸಮಾಧಾನದಿಂದಲೇ ಮಾತನಾಡಿದರು.
ಇದಕ್ಕೂ ಮುನ್ನ ಬೆಳಗ್ಗೆ ಬಿಎಸ್ವೈ ನಿವಾಸಕ್ಕೆ ಆಗಮಿಸಿದ್ದ ಎಂಟಿಬಿ ನಾಗರಾಜ್ ಉಪಚುನಾವಣೆ ಕುರಿತಂತೆ ಚರ್ಚೆ ನಡೆಸಿದರು.
ಮಹಾಲಕ್ಷ್ಮಿ ಲೇಔಟ್ನಲ್ಲಿ ಗೋಪಾಲಯ್ಯಗೆ ಟಿಕೆಟ್ ನೀಡಲು ಎಸ್.ಹರೀಶ್ ವಿರೋಧ ವ್ಯಕ್ತಪಡಿಸಿದರು. ಗೋಪಾಲಯ್ಯಗೆ ಟಿಕೆಟ್ ನೀಡುವುದು ಬೇಡ, ಪಕ್ಷಕ್ಕಾಗಿ 30 ವರ್ಷದಿಂದ ದುಡಿದವರಿದ್ದಾರೆ. ಸ್ಥಳೀಯರಿಗೆ ಟಿಕೆಟ್ ನೀಡಿ ಎಂದು ಮನವಿ ಮಾಡಿದ್ದರು. ಇದಕ್ಕೆ ಅಸಮಾಧಾನಗೊಂಡು ಹಾಗಾದರೆ ಗೋಪಾಲಯ್ಯಗೆ ವಿಷ ಕೊಡಬೇಕೆ ಎಂದು ಬಿಎಸ್ವೈ ಹರೀಶ್ಗೆ ಪ್ರಶ್ನಿಸಿದ್ದಾರೆಂದು ತಿಳಿದುಬಂದಿದೆ.
ಹಿರೇಕೆರೂರಿನಲ್ಲಿ ಬಿ.ಸಿ.ಪಾಟೀಲ್ಗೆ ಟಿಕೆಟ್ ನೀಡಲು ಮಾಜಿ ಶಾಸಕ ಯು.ಬಿ.ಬಣಕಾರ್ ವಿರೋಧ ವ್ಯಕ್ತಪಡಿಸಿದ್ದರಿಂದ ಅವರನ್ನೂ ಕೂಡ ಮನವೊಲಿಸುವ ಪ್ರಯತ್ನ ನಡೆಸಲಾಗಿದೆ.
ಕೆ.ಆರ್.ಪುರಂ, ಆರ್.ಆರ್.ನಗರ, ಕಾಗವಾಡ, ಅಥಣಿ, ಗೋಕಾಕ್ ಮತ್ತಿತರ ಕ್ಷೇತ್ರಗಳಲ್ಲಿ ಮೂಲ ನಿವಾಸಿಗಳನ್ನು ಕಡೆಗಣಿಸಿ ಅಧಿಕಾರದ ಆಸೆಗಾಗಿ ಬಂದವರಿಗೆ ಟಿಕೆಟ್ ನೀಡಬಾರದೆಂದು ಕೆಲವರು ಒತ್ತಡ ಹಾಕಿದ್ದರು.
ಈಗಾಗಲೇ ಹಂತ ಹಂತವಾಗಿ ಒಬ್ಬೊಬ್ಬರನ್ನೇ ತಮ್ಮ ನಿವಾಸಕ್ಕೆ ಕರೆಸಿಕೊಂಡು ಸಂಧಾನ ನಡೆಸುತ್ತಿರುವ ಯಡಿಯೂರಪ್ಪ ಪರಿಸ್ಥಿತಿಯನ್ನು ವಿವರಿಸುತ್ತಿದ್ದಾರೆ.
ಬಿಜೆಪಿ ಸರ್ಕಾರ ರಚನೆಯಾಗಿದ್ದ ಈ ಅನರ್ಹ ಶಾಸಕರಿಂದ. ಅವರನ್ನು ನಾವು ನಡುಬೀದಿಯಲ್ಲಿ ಬಿಡಲು ಸಾಧ್ಯವೇ ಇಲ್ಲ. ನಾವು ಈಗ ಅನರ್ಹರನ್ನು ಸರಿಯಾಗಿ ನಡೆಸಿಕೊಳ್ಳದಿದ್ದರೆ ಮುಂದೆ ನಮ್ಮ ಪಕ್ಷವನ್ನು ಯಾರೊಬ್ಬರೂ ನಂಬುವುದಿಲ್ಲ. ಯಾರೇ ಎಷ್ಟೇ ಅಡ್ಡಿಪಡಿಸಿದರೂ ಸರಿಯೇ. ನಾನು ಕೊಟ್ಟ ಮಾತಿನಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.