ಬೆಂಗಳೂರು, ಸೆ.20- ಜೆಡಿಎಸ್ ಪಕ್ಷದಲ್ಲಿ ಶಾಸಕರ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಲ್ಲ. ಒಂದು ವೇಳೆ ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಅದನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರು ಬಗೆಹರಿಸಲಿದ್ದಾರೆ ಎಂದು ಮಾಜಿ ಸಚಿವ ವೆಂಕಟಗೌಡ ನಾಡಗೌಡ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ರಾಜಕೀಯ ಪಕ್ಷಗಳಲ್ಲೂ ಸಣ್ಣಪುಟ್ಟ ಗೊಂದಲಗಳು ಇದ್ದೇ ಇರುತ್ತವೆ. ಯಾವ ಪಕ್ಷವೂ ಭಿನ್ನಾಭಿಪ್ರಾಯಕ್ಕೆ ಹೊರತಾಗಿಲ್ಲ. ಜೆಡಿಎಸ್ನಲ್ಲಿ ಅಂತಹ ಸಮಸ್ಯೆಗಳಿದ್ದರೆ ಅದನ್ನು ಪರಿಹರಿಸುವ ಶಕ್ತಿ ಪಿತಾಮಹರೆನಿಸಿದ ದೇವೇಗೌಡರಿಗಿದೆ ಎಂದರು.
ಕೆಲವು ಶಾಸಕರು ಜೆಡಿಎಸ್ ಬಿಟ್ಟು ಹೋಗಲಿದ್ದಾರೆ ಎಂಬುದು ಕೇವಲ ವದಂತಿ. ಈಗಿನ ಸಂದರ್ಭದಲ್ಲಿ ಯಾರೊಬ್ಬರೂ ಪಕ್ಷ ಬಿಟ್ಟು ಹೋಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಾನು ಕೂಡ ಪಕ್ಷ ಬಿಟ್ಟುಹೋಗುತ್ತೇನೆ ಎಂದು ವದಂತಿ ಹಬ್ಬಿಸುತ್ತಿದ್ದಾರೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಮುನ್ನೆಡೆಸುತ್ತಿರುವ ಜೆಡಿಎಸ್ ಬಿಟ್ಟು ಹೋಗುವ ಮಾತೇಕೆ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ಮಾಧ್ಯಮದಲ್ಲಿ ಹರಿದಾಡುತ್ತಿವೆ. ಯಾವುದೇ ಒಂದು ಚುನಾಯಿತ ಸರ್ಕಾರ 5 ವರ್ಷ ಪೂರ್ಣಗೊಳಿಸಬೇಕು. ಹಿಂದಿನ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಗೊಂದಲಗಳಿಂದ ಪತನವಾಯಿತು. ಇಂದಿನ ಬಿಎಸ್ವೈ ಸರ್ಕಾರ 5 ವರ್ಷವನ್ನು ಪೂರೈಸಲಿ. ಪದೇ ಪದೇ ಚುನಾವಣೆ ನಡೆಸುವುದು ಯಾವುದೇ ರಾಜಕೀಯ ಪಕ್ಷಗಳಿಗೂ ಒಳ್ಳೆಯದಲ್ಲ ಎಂದರು.
ಈಗಿನ ಸಂದರ್ಭ ನೋಡಿದರೆ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬಂದೇಬಿಡುತ್ತದೆ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ನಾವು ಚುನಾವಣೆಯನ್ನು ನಿರೀಕ್ಷೆ ಮಾಡುತ್ತಿಲ್ಲ. ಒಂದೇ ವರ್ಷದಲ್ಲಿ ಎರಡೆರಡು ಚುನಾವಣೆ ನಡೆಯುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ನೆರೆ ಪೀಡಿತ ರಾಜ್ಯಕ್ಕೆ ಕೇಂದ್ರಕ್ಕೆ ಈವರೆಗೂ ಅನುದಾನ ಬಿಡುಗಡೆಯಾಗಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲೂ ಒಂದೇ ಪಕ್ಷದ ಸರ್ಕಾರ ಇದ್ದರೂ ಈ ರೀತಿ ಮಲತಾಯಿ ಧೋರಣೆ ಸರಿಯಲ್ಲ. ಈ ಬೆಳವಣಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ಸಂಬಂಧ ಹಳಸಿದೆಯೇ ಎಂಬ ಸಂಶಯ ಮೂಡುತ್ತದೆ. ತಕ್ಷಣವೇ ಕೇಂದ್ರ ಸರ್ಕಾರ ರಾಜ್ಯಕ್ಕೆ ನೆರೆ ಪರಿಹಾರವನ್ನು ಬಿಡುಗಡೆ ಮಾಡಬೇಕೆಂದು ನಾಡಗೌಡ ಒತ್ತಾಯಿಸಿದರು.