ಬೆಂಗಳೂರು, ಸೆ.20-ಪಿತೃಪಕ್ಷ ಮುಗಿದ ನಂತರ ಜೆಡಿಎಸ್ ಪದಾಧಿಕಾರಿಗಳ ಪುನಾರಚನೆ ಮಾಡಲು ಉದ್ದೇಶಿಸಲಾಗಿದೆ.
ಕಳೆದ ಸೋಮವಾರದಿಂದ ಇಲ್ಲಿಯವರೆಗೂ 16 ಜಿಲ್ಲೆಗಳ ಜಿಲ್ಲಾ ಮಟ್ಟದ ಪದಾಧಿಕಾರಿಗಳು ಹಾಗೂ ಮುಖಂಡರ ಸಭೆ ನಡೆಸಿ ಪಕ್ಷ ಸಂಘಟನೆ ಹಾಗೂ ಪದಾಧಿಕಾರಿಗಳ ಮರುನೇಮಕ ಕುರಿತಂತೆ ಮಾಹಿತಿಯನ್ನು ಜೆಡಿಎಸ್ ವರಿಷ್ಠರು ಪಡೆದುಕೊಂಡಿದ್ದಾರೆ.
ಆಗಸ್ಟ್ ತಿಂಗಳಿನಲ್ಲೂ 13 ಜಿಲ್ಲೆಗಳ ಸಭೆ ನಡೆಸಿ ಮಾಹಿತಿ ಪಡೆಯಲಾಗಿತ್ತು. ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳ ಮುಖಂಡರ ಸಭೆ ನಡೆಸಿ ಪಕ್ಷ ಸಂಘಟನೆ ಕುರಿತಂತೆ ಮಾಹಿತಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ರಾಜ್ಯಾಧ್ಯಕ್ಷರಾದ ಎಚ್.ಕೆ.ಕುಮಾರಸ್ವಾಮಿ ಪಡೆದುಕೊಂಡಿದ್ದಾರೆ.
ಪಿತೃಪಕ್ಷ ಮುಗಿದ ನಂತರ ಅಂದರೆ, ಅಕ್ಟೋಬರ್ 2ರ ಬಳಿಕ ಜೆಡಿಎಸ್ ಪದಾಧಿಕಾರಿಗಳ ಪುನರ್ ರಚನೆ ಮಾಡಲು ಉದ್ದೇಶಿಸಲಾಗಿದೆ ಎಂದು ಎಚ್.ಕೆ.ಕುಮಾರಸ್ವಾಮಿ ತಿಳಿಸಿದರು.
ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದ ಪದಾಧಿಕಾರಿಗಳನ್ನು ಬದಲಾವಣೆ ಮಾಡಲು ನಿರ್ಧರಿಸಲಾಗಿದೆ. ಕೆಲವು ಜಿಲ್ಲೆ ಹಾಗೂ ತಾಲ್ಲೂಕುಗಳ ಪದಾಧಿಕಾರಿಗಳನ್ನು ಮುಂದುವರೆಸಲಾಗುತ್ತದೆ. ಅಕ್ಟೋಬರ್ 2ರ ನಂತರ ಪದಾಧಿಕಾರಿಗಳು ಪುನಾರಚನೆ ಚಾಲನೆ ನೀಡಲಾಗುತ್ತದೆ. ಪದಾಧಿಕಾರಿಗಳ ಮರುನೇಮಕವಾದ ನಂತರ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆ ಹಾಗೂ ವಿವಿಧ ಘಟಕಗಳ ಸಭೆ ನಡೆಸಲಾಗುತ್ತದೆ. ರಾಜ್ಯಾದ್ಯಂತ ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಪ್ರವಾಸವನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.