ನವದೆಹಲಿ, ಸೆ.18- ಧೂಮಪಾನಕ್ಕೆ ಪರ್ಯಾಯವಾದ ಮಾರಕ ಎಲೆಕ್ಟ್ರಾನಿಕ್ ಸಿಗರೇಟ್ಗಳ(ಇ-ಸಿಗರೇಟ್ಗಳ) ದುಷ್ಪರಿಣಾಮಗಳನ್ನು ತಡೆಗಟ್ಟಲು ಮುಂದಾಗಿರುವ ಕೇಂದ್ರ ಸರ್ಕಾರ, ಇದರ ಮೇಲೆ ನಿಷೇಧ ಹೇರಲು ಸುಗ್ರೀವಾಜ್ಞೆ ಹೊರಡಿಸಲು ಸಜ್ಜಾಗಿದೆ. ಈ ಸಂಬಂಧ ರೂಪಿಸಲಾಗುವ ಕಾನೂನು ನಿಯಮಗಳನ್ನು ಉಲ್ಲಂಘಿಸಿದವರಿಗೆ ಜೈಲು ಮತ್ತು ಜುಲ್ಮಾನೆ ವಿಧಿಸಲಾಗುತ್ತದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ಸಂಜೆ ನಡೆಯಲಿರುವ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಇ-ಸಿಗರೇಟ್ ನಿಷೇಧಕ್ಕೆ ಸುಗ್ರೀವಾಜ್ಞೆ ಹೊರಡಿಸಲು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ಸಂಬಂಧ ರೂಪಿಸಲಾಗಿರುವ ಇ-ಸಿಗರೇಟ್ಗಳ ನಿಷೇಧ ಸುಗ್ರೀವಾಜ್ಞೆ, 2019 ಕಟ್ಟಳೆಯನ್ನು ಪ್ರಧಾನಮಂತ್ರಿ ಕಾರ್ಯಾಲಯದ ನಿರ್ದೇಶನದ ಹಿನ್ನಲೆಯಲ್ಲಿ ಸಚಿವರ ಸಮೂಹ (ಜಿಒಎಂ) ಪರಾಮರ್ಶೆ ನಡೆಸಿ ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಒಪ್ಪಿಗೆ ಸೂಚಿಸಿದೆ.
ಕರಡು ಅಧಿಸೂಚನೆಯಲ್ಲಿ ಮೊದಲ ಬಾರಿ ಕಾನೂನು ಉಲ್ಲಂಘನೆ ಮಾಡಿದವರಿಗೆ ಕನಿಷ್ಠ ಒಂದು ವರ್ಷ ಸೆರೆವಾಸ ಮತ್ತು ಒಂದು ಲಕ್ಷ ರೂ.ಗಳ ದಂಡ ವಿಧಿಸಲು ಆರೋಗ್ಯ ಸಚಿವಾಲಯ ಉದ್ದೇಶಿಸಿದೆ. ಅಲ್ಲದೇ ಪುನರಾವರ್ತಿತ ಉಲ್ಲಂಘನೆಗಳಿಗೆ ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ.ಗಳ ಜುಲ್ಮಾನೆ ವಿಧಿಸಲು ಶಿಫಾರಸು ಮಾಡಲಾಗಿದೆ.
ಇ-ಸಿಗರೇಟ್, ಹೀಟ್-ನಾಟ್-ಬರ್ನ್ ಸ್ಮೋಕಿಂಗ್ ಸಾಧನಗಳು, ವೇಪ್ ಮತ್ತು ಇ-ನಿಕೋಟಿನ್ ಸ್ವಾದದ ಹುಕ್ಕಾ ಇತ್ಯಾದಿಯಂಥ ಇ-ಸಿಗರೇಟ್ಗಳ ಪರ್ಯಾಯ ಧೂಮಪಾನ ವಸ್ತುಗಳನ್ನು ನಿಷೇಧಿಸುವುದು ಮೋದಿ ಸರ್ಕಾರದ ಪ್ರಥಮ 100 ದಿನಗಳ ಕಾರ್ಯಸೂಚಿಯಾಗಿತ್ತು.
ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಸುಗ್ರೀವಾಜ್ಞೆ ಜಾರಿಗೊಳಿಸಿದರೆ, ಮುಂದಿನ ಸಂಸತ್ ಅಧಿವೇಶನದಲ್ಲಿ ಮಸೂದೆ ಮಂಡನೆಗೆ ಅವಕಾಶವಾಗಲಿದೆ.
ಸಿಗರೇಟ್ಗೆ ಪರ್ಯಾಯವಾಗಿರುವ ಇ-ಸಿಗರೇಟ್ಗಳು ಭಾರತದಲ್ಲಿ ಧೂಮಪಾನಿಗಳನ್ನು ವಿಶೇಷವಾಗಿ ಆಕರ್ಷಿಸುತ್ತಿದ್ದು, ಇಂಥ ಉತ್ಪನ್ನಗಳು ಭರ್ಜರಿ ವಹಿವಾಟು ನಡೆಸುತ್ತಿವೆ. ಇವು ಸಿಗರೇಟ್ನಂತೆಯೇ ದುಷ್ಪರಿಣಾಮ ಬೀರಲಿದ್ದು, ಆರೋಗ್ಯಕ್ಕೆ ಹಾನಿಕರ.