ಚೆನ್ನೈ, ಸೆ.18- ಹಿಂದಿ ಭಾಷೆ ಹೇರಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಸೂಪರ್ ಸ್ಟಾರ್ ರಜನಿಕಾಂತ್ ಸಾಮಾನ್ಯ ಭಾಷೆ ಪರಿಕಲ್ಪನೆ ನಮ್ಮ ಭಾರತದಲ್ಲಿ ಯಶಸ್ವಿಯಾಗುವುದಿಲ್ಲ ಎಂದು ಗುಡುಗಿದ್ದಾರೆ.
ಚೆನ್ನೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಲವಂತವಾಗಿ ಹಿಂದಿಯನ್ನು ಹೇರುವುದು ಸರಿಯಲ್ಲ. ಒಂದು ವೇಳೆ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸುವ ಪ್ರಯತ್ನ ನಡೆದರೆ ದಕ್ಷಿಣ ಭಾರತದ ರಾಜ್ಯಗಳಲ್ಲದೆ ಉತ್ತರ ಭಾರತದಲ್ಲೂ ವ್ಯಾಪಕ ಪ್ರತಿರೋಧ ವ್ಯಕ್ತವಾಗಲಿದೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಹಿಂದಿಯನ್ನು ದೇಶದಲ್ಲಿ ಸಾಮಾನ್ಯ ಭಾಷೆಯನ್ನಾಗಿ ಮಾಡಬೇಕಾದ ಅಗತ್ಯವಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹಿಂದಿ ಭಾಷೆ ಹೇರಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಭಾರತ ವೈವಿಧ್ಯಮಯ ದೇಶ. ಇಲ್ಲಿ ಅನೇಕ ಪ್ರಾದೇಶಿಕ ಭಾಷೆಗಳಿವೆ. ಹೀಗಿರುವಾಗ ಹಿಂದಿಯನ್ನು ಸಾಮಾನ್ಯ ಭಾಷೆಯನ್ನಾಗಿ ಮಾಡಬೇಕೆಂಬ ಪರಿಕಲ್ಪನೆ ದುರಾದೃಷ್ಟವಶಾತ್ ಯಶಸ್ವಿಯಾಗುವುದಿಲ್ಲ. ಹೀಗಾಗಿ ಇದನ್ನು ಬಲವಂತವಾಗಿ ಹೇರುವುದು ಸರ್ವತಃ ಸರಿಯಲ್ಲ ಎಂದು ತಲೈವಾ ತಿಳಿಸಿದ್ದಾರೆ.