ಬೆಂಗಳೂರು, ಸೆ.19- ಯಾವುದೇ ಜನಾಂಗ, ಧರ್ಮವಾಗಲಿ ಹೆಣ್ಣನ್ನು ಬೆಳೆಸಬೇಕು, ಸಂರಕ್ಷಿಸಬೇಕು, ಶಿಕ್ಷಣ, ಉದ್ಯೋಗ ನೀಡಿ ಆರ್ಥಿಕವಾಗಿ ಬೆಳೆಸಿ ಸಮಾಜದ ಮುಖ್ಯವಾಹಿನಿಗೆ ಬರುವತನಕ ಎಲ್ಲಾ ರೀತಿಯ ನೆರವು ನೀಡಬೇಕೆಂದು ಅಖಿಲ ಕರ್ನಾಟಕ ತೇರಾಪಂಥ್ ಮಹಿಳಾ ಮಂಡಲ್ ಅಧ್ಯಕ್ಷೆ ಶಾಂತಸಕ್ಲೇಚ ಕರೆ ನೀಡಿದರು.
ಮೈಸೂರು ರಸ್ತೆಯ ಅಂಚೇಪಾಳ್ಯದಲ್ಲಿ ಅಖಿಲ ಕರ್ನಾಟಕ ತೇರಾಪಂಥ್ ಮಹಿಳಾ ಮಂಡಲ್ ಬೆಂಗಳೂರು ವತಿಯಿಂದ ಹಮ್ಮಿಕೊಂಡಿದ್ದ ಹೆಣ್ಣು ಮಗು ಉಳಿಸಿ, ಬೆಳೆಸಿ ಆಂದೋಲನ ಮತ್ತು ಕನ್ಯಾ ಸುರಕ್ಷಾ ವೃತ್ತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೆಣ್ಣು ಎಂಬ ತಾತ್ಸಾರ ಭಾವನೆ ಬಿಟ್ಟು, ಹೆಣ್ಣು ಭ್ರೂಣ ಹತ್ಯೆ ಮಾಡಬಾರದು. ಹೆಣ್ಣು ಎಲ್ಲಾ ರಂಗಗಳಲ್ಲಿಯೂ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದು, ತಾಯಿ, ಅಕ್ಕ ತಂಗಿ, ಮಡದಿಯಾಗಿ ಎಲ್ಲಾ ರೀತಿಯಲ್ಲಿ ಕುಟುಂಬವನ್ನು ಮುನ್ನಡೆಸುವ ಅದೃಷ್ಟವಂತೆ ಅವಳೇ ಎಂದರು.
ಗ್ರಾಮ ಪಂಚಾಯತಿ ಅಧ್ಯಕ್ಷ ಚಿಕ್ಕರಾಜು ಮಾತನಾಡಿ, ದೇವರ ಸೃಷ್ಠಿ, ಮಾನವ ಸೃಷ್ಠಿ, ಜಗತ್ ಸೃಷ್ಠಿಗೆ ಹೆಣ್ಣೇ ಕಾರಣವಾಗಿದ್ದು, ಹೆಣ್ಣು ಹೆಂಬ ಕೀಳರಿಮೆ ಬಿಟ್ಟು ಮಹಾಲಕ್ಷ್ಮಿ, ಸಂಸಾರದ ಕಣ್ಣು, ಹೆಣ್ಣನ್ನು ಆರಾಧಿಸಿ ಪೂಜಿಸಬೇಕು. ಆಗ ಮಾತ್ರ ಇಡೀ ಸಮಾಜ, ಸಂಸಾರ ಆನಂದಮಯವಾಗಿರುತ್ತದೆ ಎಂದು ತಿಳಿಸಿದರು.
ಜಂಟಿ ಕಾರ್ಯದರ್ಶಿ ಸುರೇಶ್ಡಾಕ್ ಮಾತನಾಡಿ, ಹೆಣ್ಣಿಗೆ ಗೌರವ ಕೊಡದ ಕ್ಷೇತ್ರ ಇಂದಿಗೂ ಎಂದಿಗೂ ಏಳಿಗೆ ಪಡೆಯುವುದಿಲ್ಲ. ಆದ್ದರಿಂದ ಹೆಣ್ಣಿಗೆ ಪ್ರಥಮ ಸ್ಥಾನ ಕೊಟ್ಟು ಅವರ ರಕ್ಷಣೆಗೆ ನಾವೆಲ್ಲ ಪಣ ತೊಡಬೇಕು ಎಂದರು.
ಸೆಂಟ್ ಬೆನಡಿಕ್ಟ್ ಶಾಲೆಯ ಪ್ರಾಂಶುಪಾಲರಾದ ಮೀನಾ , ವಿಮಲ್ಕಟಾರಿಯಾ, ಮುಲ್ಚಂದ್ ನಹಾರ್, ಕಿರಣ್ಗಿಲುಂಡಿಯಾ, ದೀಪ್ಚಂದ್ ನಹಾರ್, ಅವಿನಾಶ್ ನಹಾರ್, ಬದ್ರಿಲಾಲ್ ಪಿಟ್ಲಿಯಾ, ಪ್ರಕಾಶ್ ಲೋಧ, ಕೆ.ಎಲ್.ಗಿಡಿಯಾ, ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಯಶೋಧಮ್ಮ, ಸದಸ್ಯರಾದ ಅಮುಲ್ರಾಜ್, ಅನಿಶ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ಹೆಣ್ಣು ಮಕ್ಕಳಿಗೆ ವಿವಿಧ ಸವಲತ್ತುಗಳು ಮತ್ತು ವಿಶೇಷ ಚರ್ಚಾ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಿಜೇತರಾದವರಿಗೆ ಬಹುಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು.