ಕಾಬೂಲ್, ಸೆ.19- ತಾಲಿಬಾನ್ ಉಗ್ರಗಾಮಿಗಳ ಸರಣಿ ದಾಳಿಗಳಿಂದ ನಲುಗಿರುವ ಆಫ್ಘಾನಿಸ್ತಾನದಲ್ಲಿ ಚುನಾವಣೆಗೆ ಮುನ್ನವೇ ಭಾರೀ ಹಿಂಸಾಚಾರಗಳು ಮುಂದುವರೆದಿವೆ.
ಆಫ್ಘಾನಿಸ್ತಾನದ ದಕ್ಷಿಣ ಝಬುಲ್ ಪ್ರಾಂತ್ಯದ ಕಲಾಟ್ ಪ್ರದೇಶದ ಆಸ್ಪತ್ರೆಯೊಂದರ ಮೇಲೆ ಬಂಡುಕೋರರ ನಡೆಸಿದ ಟ್ರಕ್ ಬಾಂಬ್ ಆತ್ಮಾಹುತಿ ದಾಳಿಯಲ್ಲಿ 22ಕ್ಕೂ ಹೆಚ್ಚು ಮಂದಿ ಮೃತಪಟ್ಟು ಸುಮಾರು 90 ಜನರು ತೀವ್ರ ಗಾಯಗೊಂಡಿದ್ದಾರೆ. ಈ ದಾಳಿಯಲ್ಲಿ ಆಸ್ಪತ್ರೆಯ ಕಟ್ಟಡಕ್ಕೆ ಮತ್ತು ಆ್ಯಂಬುಲೆನ್ಸ್ಗಳಿಗೆ ಹಾನಿಯಾಗಿವೆ.
ಮೃತಪಟ್ಟವರು ಮತ್ತು ಗಾಯಾಳುಗಳಲ್ಲಿ ರೋಗಿಗಳು, ಆಸ್ಪತ್ರೆ ಸಿಬ್ಬಂದಿ ಮತ್ತು ತಮ್ಮವರ ಆರೋಗ್ಯ ವಿಚಾರಿಸಲು ಬಂದಿದ್ದ ಜನರು ಸೇರಿದ್ದಾರೆ.
ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಅತ್ಯಂತ ಶೋಚನೀಯವಾಗಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಮೊನ್ನೆ 50ಕ್ಕೂ ಹೆಚ್ಚು ಮಂದಿ ಬಲಿಯಾಗಿ ಅನೇಕರು ತೀವ್ರ ಗಾಯಗೊಂಡ ಬೆನ್ನಲ್ಲೆ ಆಫ್ಘಾನಿಸ್ತಾನದಲ್ಲಿ ಇಂದು ಮುಂಜಾನೆ ನಡೆದ ಈ ದಾಳಿಯಿಂದ ಜನರು ಭಯಭೀತರಾಗಿದ್ದಾರೆ.
ಆಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ರಾಜಧಾನಿ ಕಾಬೂಲ್ ಸಮೀಪದ ಪರ್ವನ್ ಪ್ರದೇಶದಲ್ಲಿ ಮೊನ್ನೆ ನಡೆದ ಆತ್ಮಾಹುತಿ ದಾಳಿಯಲ್ಲಿ 26 ಮಂದಿ ಮೃತಪಟ್ಟು 45ಕ್ಕೂ ಹೆಚ್ಚು ಜನರು ತೀವ್ರ ಗಾಯಗೊಂಡಿದ್ದರು.
ಇದಾದ ಒಂದು ಗಂಟೆ ಬಳಿಕ ಕಾಬೂಲ್ ಮಧ್ಯಭಾಗದಲ್ಲಿ ಅಮೆರಿಕ ರಾಯಭಾರಿ ಕಚೇರಿ ಇರುವ ಸ್ಥಳದ ಬಳಿ ಬಾಂಬ್ ಸ್ಫೋಟಗೊಂಡು 22 ಮಂದಿ ಹತರಾದರು.
ತಾಲಿಬಾನ್ ಉಗ್ರರ ಜತೆ ಮಾತುಕತೆ ಪ್ರಕ್ರಿಯೆ ಸತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ ನಂತರ ಆಫ್ಘಾನಿಸ್ತಾನದಲ್ಲಿ ಅದರಲ್ಲೂ ಅಮೆರಿಕ ಸೇನಾ ನೆಲೆಗಳ ಮೇಲೆ ಭಾರೀ ದಾಳಿ ನಡೆಸುವುದಾಗಿ ತಾಲಿಬಾನ್ ಗಂಭೀರ ಎಚ್ಚರಿಕೆ ನೀಡಿತ್ತು.
ಅದಾದ ಮರುದಿನದಿಂದಲೇ ಕಣಿವೆ ರಾಷ್ಟ್ರದಲ್ಲಿ ತಾಲಿಬಾನ್ ಬಂಡುಕೋರರ ಅಟ್ಟಹಾಸ ಮತ್ತು ಹಿಂಸಾಚಾರ ಮುಂದುವರಿದಿದೆ.