
ಮುಂಬೈ,ಸೆ.18- ಹಾರರ್ ಸಿನಿಮಾಗಳ ಖ್ಯಾತ ನಿರ್ಮಾಪಕ ಶ್ಯಾಮ್ ರಾಮ್ಸೆ(67) ಇಂದು ಮುಂಜಾನೆ ಮುಂಬೈನಲ್ಲಿ ನಿಧನರಾದರು.
ನ್ಯೂಮೋನಿಯಾದಿಂದ ಬಳಲುತ್ತಿದ್ದ ಇವರು ಕಳೆದ ಮೂರು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗ್ಗೆ ಅವರು ಕೊನೆಯುಸಿರೆಳೆದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಸಪ್ತ ರಾಮ್ಸೆ ಸಹೋದರರಲ್ಲಿ ಒಬ್ಬರಾಗಿದ್ದ ಶ್ಯಾಮ್ ಪುರಾನಿ ಹವೇಲಿ, ತಹಖಾನಾ ಸೇರಿದಂತೆ ಅನೇಕ ಭಯಾನಕ ಸಿನಿಮಾಗಳನ್ನು ನಿರ್ಮಿಸಿದರು.
ಇವರ ಚಿತ್ರ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣವಾದ ಬಹುತೇಕ ಸಿನಿಮಾಗಳು ಯಶಸ್ವಿಯಾಗಿದ್ದವು.
ಆರಂಭದಲ್ಲಿ ಪುಟ್ಟ ರೇಡಿಯೋ ಶಾಪ್ ಇಟ್ಟುಕೊಂಡಿದ್ದ ರಾಮ್ಸೆ ಸಹೋದರರು ನಂತರ ಚಿತ್ರ ನಿರ್ಮಾಣಕ್ಕೆ ಮುಂದಾದರು. 1957ರಲ್ಲಿ ಶಾಹೀದ್- ಎ-ಅಜಮ್ ಭಗತ್ಸಿಂಗ್ ಮತ್ತು ರುಸ್ತುಂ ಸೊಹ್ರಬ್(1963) ಸಿನಿಮಾ ನಿರ್ಮಿಸಿದರು. ಪೃಥ್ವಿರಾಜ್ ಕಪೂರ್ ಮತ್ತು ಸುರ್ರಯ್ಯ ಅಭಿನಯದ ಚಿತ್ರ ಭರ್ಜರಿ ಹಿಟ್ ಆಗಿತ್ತು. ನಂತರ ಇವರ ಒಲವು ಹಾರರ್ಸಿನಿಮಾಗಳತ್ತ ನೆಟ್ಟಿತು.
20ಕ್ಕೂ ಹೆಚ್ಚು ಹಾರರ್ ಸಿನಿಮಾಗಳನ್ನು ನಿರ್ಮಿಸಿದ ಅವರು ಝೀ ವಾಹಿನಿಗಾಗಿ ಬಂಡವಾಳ ಹೂಡಿದ್ದ ಝೀ ಹಾರರ್ ಶೋ ಅದ್ಭುತ ಯಶಸ್ವಿಯಾಯಿತು. ನೇಬರರ್ಸ್ (2014) ಶ್ಯಾಮ್ ರಾಮ್ಸೆ ನಿರ್ಮಾಣದ ಕೊನೆ ಸಿನಿಮಾ.
ಇವರ ನಿಧನಕ್ಕೆ ಅಮಿತಾಬ್ ಬಚನ್ ಸೇರಿದಂತೆ ಬಾಲಿವುಡ್ನ ಅನೇಕ ಗಣ್ಯಾತಿಗಣ್ಯರು ಸಂತಾಪ ಸೂಚಿಸಿದರು.