ಕೊನೆಗೂ ತಿಹಾರ್ ಜೈಲು ಪಾಲಾದ ಡಿ.ಕೆ.ಶಿವಕುಮಾರ್

ನವದೆಹಲಿ, ಸೆ.19- ಅಕ್ರಮ ಹಣದ ವಹಿವಾಟು ಆರೋಪದ ಮೇಲೆ ಕರ್ನಾಟಕದ ಮಾಜಿ ಸಚಿವ ಹಾಗೂ ಕಾಂಗ್ರೆಸ್‍ನ ಟ್ರಬಲ್ ಶೂಟರ್ ಎಂದೇ ಗುರುತಿಸಿಕೊಂಡಿದ್ದ ಡಿ.ಕೆ.ಶಿವಕುಮಾರ್ ಕೊನೆಗೂ ತಿಹಾರ್ ಜೈಲು ಪಾಲಾಗಿದ್ದಾರೆ.

ನವದೆಹಲಿಯ ತಿಹಾರ್ ಜೈಲ್ ಪಾಲಾದ ಕರ್ನಾಟಕದ ಮೊಟ್ಟಮೊದಲ ರಾಜಕಾರಣಿ ಡಿ.ಕೆ.ಶಿವಕುಮಾರ್ ಆಗಿದ್ದಾರೆ. ಅಧಿಕ ರಕ್ತದೊತ್ತಡ ಸೇರಿದಂತೆ ಇತರ ಅನಾರೋಗ್ಯ ಸಮಸ್ಯೆಯಿಂದ ಕಳೆದೆರಡು ದಿನಗಳಿಂದ ನವದೆಹಲಿಯ ಆರ್‍ಎಂಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡಿ.ಕೆ.ಶಿವಕುಮಾರ್ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ದೃಢಪಡಿಸಿದ್ದರಿಂದ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಇಂದು ಬೆಳಗ್ಗೆ 11 ಗಂಟೆಗೆ ತಿಹಾರ್ ಜೈಲಿಗೆ ರವಾನೆ ಮಾಡಲಾಗಿದೆ.

ಸದ್ಯ ತಿಹಾರ್ ಜೈಲಿನಲ್ಲಿ ಡಿ.ಕೆ.ಶಿವಕುಮಾರ್‍ಗೆ ಗಣ್ಯ ವ್ಯಕ್ತಿಗಳಿಗೆ ನೀಡುವ ಸೆಲ್ ನಂಬರ್ 7ರಲ್ಲಿ ಇರಿಸಲಾಗಿದೆ. ವಿಶೇಷವೆಂದರೆ ಈಗಾಗಲೇ ಜೈಲು ಪಾಲಾಗಿರುವ  ಮಾಜಿ ಸಚಿವ ಪಿ.ಚಿದಂಬರಂ ಪಕ್ಕದ ಸೆಲ್‍ನಲ್ಲೇ ಡಿಕೆಶಿ ಇದ್ದಾರೆ.

ಇಂದು ಮಧ್ಯಾಹ್ನ 3 ಗಂಟೆಗೆ ದೆಹಲಿಯ ಇಡಿ ವಿಶೇಷ ನ್ಯಾಯಾಲಯದಲ್ಲಿ ಡಿ.ಕೆ.ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

ಒಂದು ವೇಳೆ ನ್ಯಾಯಾಲಯ ಅವರಿಗೆ ಷರತ್ತುಬದ್ದ ಜಾಮೀನು ನೀಡಿದರೆ ಶಿವಕುಮಾರ್ ಬಿಡುಗಡೆಯಾಗಲಿದ್ದಾರೆ. ಆರೋಪಿಗೆ ಜಾಮೀನು ನೀಡಿದರೆ ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಇದೆ ಎಂದು ಇಡಿ ಪರ ವಕೀಲರು ಆಕ್ಷೇಪಣೆ ವ್ಯಕ್ತಪಡಿಸಲಿದ್ದಾರೆ.

ಸಾಮಾನ್ಯವಾಗಿ ಕೆಳಹಂತದ ನ್ಯಾಯಾಲಗಳು ಹೈಪ್ರೊಫೈಲ್ ಕೇಸ್‍ಗಳಲ್ಲಿ  ಜಾಮೀನು ನೀಡಲು ಹಿಂದೇಟು ಹಾಕುತ್ತವೆ. ಕೆಳಹಂತದ  ನ್ಯಾಯಾಲಯದಲ್ಲಿ ಅರ್ಜಿ  ವಜಾಗೊಂಡರೆ ಹೈಕೋರ್ಟ್ ಮೆಟ್ಟಿಲೇರುವ ಅನಿವಾರ್ಯತೆ ಎದುರಾಗುತ್ತದೆ.

ಈಗಾಗಲೇ ಇಡಿ ಪರ ವಕೀಲರಾದ ಕೆ.ಎಂ.ನಟರಾಜು ಅವರು ಡಿ.ಕೆ.ಶಿವಕುಮಾರ್ ಅವರಿಗೆ ಜಾಮೀನು ನೀಡುವುದಕ್ಕೆ ತಕರಾರು ಅರ್ಜಿ  ಸಲ್ಲಿಸಿದ್ದಾರೆ.

ಆರೋಪಿಯು ಸಾಕಷ್ಟು ಪ್ರಬಲಶಾಲಿಯಾಗಿರುವುದರಿಂದ ಸಾಕ್ಷಿಧಾರರ ಮೇಲೆ  ಒತ್ತಡ ಹೇರುವ ಹಾಗೂ ಸಾಕ್ಷಿಗಳನ್ನು ನಾಶಪಡಿಸುವ ಸಾಧ್ಯತೆ ಇದೆ. ಅಲ್ಲದೆ ಈವರೆಗೂ  ಇಡಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಡಿ.ಕೆ.ಶಿವಕುಮಾರ್ ಅವರು ಸಮರ್ಪಕ ಉತ್ತರ ನೀಡಿಲ್ಲ.

ಹೀಗಾಗಿ ಅವರನ್ನು ಇನ್ನಷ್ಟು ವಿಚಾರಣೆ ಗೊಳಪಡಿಸಬೇಗಿದೆ ಎಂದು ನಟರಾಜ್  ಅವರು ವಾದಿಸಿದ್ದರು. ಸೆ.3ರಂದು ಇಡಿ ಅಧಿಕಾರಿಗಳು ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿದ್ದರು. ಮೊದಲ ಹಂತದಲ್ಲಿ 10 ದಿನ ಆನಂತರ 4 ದಿನ ಸೇರಿ ಒಟ್ಟು 14 ದಿನಗಳ ಕಾಲ ನ್ಯಾಯಾಲಯ ಡಿ.ಕೆ.ಶಿವಕುಮಾರ್ ಅವರನ್ನು ಜಾರಿನಿರ್ದೇಶನಾಲಯದ ವಶಕ್ಕೆ ನೀಡಿತ್ತು.

ಸೆ.17ಕ್ಕೆ ಜಾರಿ ನಿರ್ದೇಶನಾಲಯದ ಅಧೀನ ವಿಚಾರಣೆ ಮುಕ್ತಾಯಗೊಂಡಿದೆ. ನಿನ್ನೆ ನಡೆದ ಜಾಮೀನು ಅರ್ಜಿಯ ವಿಚಾರಣೆಯಲ್ಲಿ ಡಿ.ಕೆ.ಶಿವಕುಮಾರ್ ಪರ ಅಭಿಷೇಕ್ ಮನುಸಿಂಘ್ವಿ ಮತ್ತು ಮುಕುಲ್ ರೋಹ್ಟಗಿ ವಾದ ಮಂಡಿಸಿ ಜಾಮೀನು ನೀಡುವಂತೆ ಮನವಿ ಮಾಡಿದರು.

ಜಾರಿ  ನಿರ್ದೇಶನಾಲಯದ ಪರ ವಕೀಲ ನಟರಾಜ್ ಅವರು ನ್ಯಾಯಾಲಯದ ಕಲಾಪಕ್ಕೆ ಹಾಜರಾಗದೆ ಇದ್ದುದ್ದರಿಂದ ವಿಚಾರಣೆಯನ್ನು ಮುಂದೂಡಲಾಗಿದ್ದು, ಇಂದು ಮಧ್ಯಾಹ್ನ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಅಜಯ್ ಕುಮಾರ್ ಕುಹರ್ ಜಾಮೀನು ಅರ್ಜಿಯ ಮುಂದುವರೆದ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದ್ದಾರೆ.

ಒಂದು ವೇಳೆ ಜಾಮೀನು ಸಿಕ್ಕಿದ್ದೇ ಆದರೆ ಡಿ.ಕೆ.ಶಿವಕುಮಾರ್ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ.  ಈ ಹಿಂದಿನ ಆದೇಶದ ಪ್ರಕಾರ ಅ.1ರವರೆಗೆ ನ್ಯಾಯಾಂಗ ಬಂಧನದ ಅವಧಿಯಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ