80ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸಿದ ಚಿತ್ರ ಅಂತ. 1981ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರಕ್ಕೆ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಆಕ್ಷನ್ ಕಟ್ ಹೇಳಿದ್ದರು. ರೆಬೆಲ್ಸ್ಟಾರ್ ಅಂಬರೀಶ್ ನಾಯಕರಾಗಿ ನಟಿಸಿದ್ದ ಈ ಚಿತ್ರ ಕಲಾ ರಸಿಕರ ಮನಸೂರೆಗೊಂಡಿತ್ತು. ಈಗ ಈ ಚಿತ್ರಕ್ಕೆ ವಿಶೇಷ ತಂತ್ರಜ್ಞಾನಗಳನ್ನು ಅಳವಡಿಸಲಾಗಿದ್ದು, ಚಿತ್ರ ಸೆಪ್ಟೆಂಬರ್ 27ರಂದು ತೆರೆಗೆ ಬರಲಿದೆ. ಸೆಪ್ಟೆಂಬರ್ 20ರಂದು ‘ಅಂತ’ ಚಿತ್ರವನ್ನು ಮರು ಬಿಡುಗಡೆ ಮಾಡಬೇಕೆಂದುಕೊಂಡಿದ್ದ ನಿರ್ಮಾಪಕ ವೇಣುಗೋಪಾಲ್ ಅವರು ಡಾ||ವಿಷ್ಣವರ್ಧನ ಅವರ ಸ್ನೇಹ ಸಂಬಂಧಕ್ಕಾಗಿ ಒಂದು ವಾರ ತಡವಾಗಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.
ಪರಿಮಳ ಆರ್ಟ್ ಮೂಲಕ ಹೆಚ್.ಎನ್. ಮಾರುತಿ ಹಾಗೂ ವೇಣುಗೋಪಾಲ್ ಈ ಚಿತ್ರವನ್ನು ನಿರ್ಮಿಸಿದ್ದರು. ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದರು. ಜಿ.ಕೆ. ವೆಂಕಟೇಶ್ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿದ್ದ ಅಂತ ಚಿತ್ರದ ಸುಮಧುರ ಗೀತೆಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ನಿಂತಿವೆ. ಈ ಚಿತ್ರವನ್ನು ಈಗ ಡಿಜಿಟಲ್ ಫಾರ್ಮಾಟ್ನಲ್ಲಿ ಬಿಡುಗಡೆ ಮಾಡಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.
ಹೊಸ ರೂಪದ ‘ಅಂತ’ ಚಿತ್ರವನ್ನು ರಾಜ್ಯಾದ್ಯಂತ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆ ಮಾಡಲಾಗುತ್ತಿದೆ ಎಂದು ನಿರ್ಮಾಪಕ ವೇಣುಗೋಪಾಲ್ ತಿಳಿಸಿದ್ದಾರೆ. ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ರೆಬೆಲ್ಸ್ಟಾರ್ ಅಂಬರೀಶ್(ದ್ವಿಪಾತ್ರ) ಲಕ್ಷ್ಮಿ, ಜಯಮಾಲಾ, ಲತಾ, ಪಂಡರೀಬಾಯಿ, ವಜ್ರಮುನಿ, ಪ್ರಭಾಕರ್, ಸುಂದರ ಕೃಷ್ಣ ಅರಸ್, ಶಕ್ತಿ ಪ್ರಸಾದ್, ಲಕ್ಷ್ಮಣ್, ಸಿ.ಸೀತಾರಾಮ್ ನಟಿಸಿದ್ದರು.