ಬೆಂಗಳೂರು, ಸೆ.19- ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚದೇ ಇದ್ದರೆ ಸಂಬಂಧಪಟ್ಟ ಇಂಜಿನಿಯರ್ಗಳಿಗೆ ದಂಡ ಹಾಕುವುದಾಗಿ ಬಿಬಿಎಂಪಿ ಆಯುಕ್ತರು ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ ರಾತ್ರೋರಾತ್ರಿ ಗುಂಡಿಗಳು ಕಣ್ಮರೆಯಾಗುತ್ತಿವೆ.
ರಸ್ತೆಗಳ ಅಸಮರ್ಪಕ ನಿರ್ವಹಣೆಯಿಂದ ಸಾರ್ವಜನಿಕರು ಮತ್ತು ವಾಹನ ಸವಾರರು ತೊಂದರೆಗೊಳಗಾಗುತ್ತಿದ್ದಾರೆ. ಈ ವಿಷಯದಲ್ಲಿ ಯಾವುದೇ ದಾಕ್ಷಿಣ್ಯಕ್ಕೆ ಒಳಗಾಗುವುದಿಲ್ಲ. ಕರ್ತವ್ಯ ಲೋಪವೆಸಗುವ ಇಂಜಿನಿಯರ್ಗಳನ್ನು ಸಸ್ಪೆಂಡ್ ಮಾಡಲಾಗುವುದು ಮತ್ತು ಸದರಿ ಇಂಜಿನಿಯರ್ಗಳಿಗೆ ದಂಡ ವಿಧಿಸಿ ಅವರ ವೇತನ ಖಾತೆಯಿಂದ ದಂಡದ ಹಣವನ್ನು ಕಡಿತ ಮಾಡುವುದಾಗಿ ಆಯುಕ್ತ ಅನಿಲ್ಕುಮಾರ್ ಎಚ್ಚರಿಕೆ ನೀಡಿದ್ದರು.
ವರ್ತೂರು-ಗುಂಜೂರು ನಡುವಿನ ರಸ್ತೆಯ ಅಸಮರ್ಪಕ ನಿರ್ವಹಣೆಗಾಗಿ ಆ ಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಅವರನ್ನು ಅಮಾನತುಪಡಿಸಲಾಗಿದೆ.
ಇನ್ನು ಮುಂದೆ ಯಾವುದೇ ಕಾರಣಕ್ಕೂ ರಸ್ತೆಗಳ ಅಸಮರ್ಪಕ ನಿರ್ವಹಣೆಯನ್ನು ಸಹಿಸುವುದಿಲ್ಲ ಎಂದು ಆಯುಕ್ತರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಈವರೆಗೂ ಅಸಮರ್ಪಕ ರಸ್ತೆಗಳಿಂದ ತೊಂದರೆಗೊಳಗಾದವರ ಬಗ್ಗೆ ಆಯುಕ್ತರು ಅನುಕಂಪ ವ್ಯಕ್ತಪಡಿಸಿದ್ದಾರೆ.
ಆಯುಕ್ತರು ಕಠಿಣ ಎಚ್ಚರಿಕೆ ನೀಡಿ ಒಂದಿಬ್ಬರನ್ನು ದಂಡಿಸಲು ಮುಂದಾಗುತ್ತಿದ್ದಂತೆ ಇಂಜಿನಿಯರ್ಗಳಲ್ಲಿ ನಡುಕ ಆರಂಭವಾಗಿದೆ. ರಾತ್ರೋರಾತ್ರಿ ರಸ್ತೆಗಳ ಗುಂಡಿಗಳನ್ನು ಮುಚ್ಚಲು ಆರಂಭಿಸಿದ್ದಾರೆ.
ತಡ ರಾತ್ರಿಯಲ್ಲಿ ಜೆಲ್ಲಿಕಲ್ಲು, ಮರಳು ಹಾಗೂ ಡಾಂಬರ್ನಿಂದ ಗುಂಡಿಗಳನ್ನು ಮುಚ್ಚಿ ತ್ಯಾಪೆ ಮಾಡಲಾಗುತ್ತಿದೆ. ಕೆಲವು ರಸ್ತೆಗಳಂತೂ ಗುಡ್ಡಗಾಡು ರಸ್ತೆಯಂತೆ ಮೊಳಕಾಲುದ್ದ ಗುಂಡಿ ಬಿದ್ದು ವಾಹನ ಸವಾರರನ್ನು ಹೈರಾಣಾಗುತ್ತಿದ್ದರು.
ಮಳೆ ಬಂದು ಗುಂಡಿಗಳಲ್ಲಿ ನೀರು ತುಂಬಿಕೊಂಡು ರಸ್ತೆಗಳ್ಯಾವುದು, ಗುಂಡಿಗಳ್ಯಾವುದು ಎಂದು ತಿಳಿಯದೆ ಬಹಳಷ್ಟು ಸವಾರರು ಬಿದ್ದು ಕೈಗಾಲು ಮುರಿದುಕೊಂಡಿರುವ ಉದಾಹರಣೆಗಳಿವೆ.
ಬಾಯಿ ಮಾತಿಗೆ ಎಷ್ಟು ಬಾರಿ ಹೇಳಿಕೆ ನೀಡಿದ್ದರೂ ಇಂಜಿನಿಯರ್ಗಳು ಕ್ಯಾರೆ ಎಂದಿರಲಿಲ್ಲ. ದಂಡ ಪ್ರಯೋಗ ಪರಿಣಾಮ ಬೀರಿದಂತಿದೆ. ಕೆಲವೆಡೆ ಗುಂಡಿ ಮುಚ್ಚುವ ಕೆಲಸ ತರಾತುರಿಯಲ್ಲಿ ನಡೆಯುತ್ತಿದೆ.