ವಿಜಯನಗರವನ್ನು ಪ್ರತ್ಯೇಕ ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡಬೇಕು

ಬೆಂಗಳೂರು, ಸೆ.18- ಬಳ್ಳಾರಿ ಜಿಲ್ಲೆಯನ್ನು ವಿಭಾಗಿಸಿ ವಿಜಯನಗರ (ಹಿಂದಿನ ಹೊಸಪೇಟೆ)ವನ್ನು ಪ್ರತ್ಯೇಕ ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಇಂದು ಜಿಲ್ಲಾ ಜನಪ್ರತಿನಿಧಿಗಳು ಮತ್ತು ಜಗದ್ಗುರುಗಳ ನಿಯೋಗ ಮನವಿ ಮಾಡಿದೆ.

ಉಜ್ಜೈನಿ ಪೀಠದ ಜಗದ್ಗುರು ಶ್ರೀ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿ ನೇತೃತ್ವದಲ್ಲಿ ಶಾಸಕ ಜೆ.ಗಣೇಶ್, ವಿಧಾನಪರಿಷತ್ ಸದಸ್ಯರಾದ ಅಲ್ಲಂ ವೀರಭದ್ರಪ್ಪ, ಕೆ.ಸಿ.ಕೊಂಡಯ್ಯ, ಅನರ್ಹಗೊಂಡ ಮಾಜಿ ಶಾಸಕ ಆನಂದ್‍ಸಿಂಗ್, ಮಾಜಿ ಶಾಸಕ ನೇಮಿ ಚಂದ್ರನಾಯಕ್ ಸೇರಿದಂತೆ ಮತ್ತಿತರರ ನಿಯೋಗವು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ವಿಜಯನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುವಂತೆ ಮನವಿ ಪತ್ರ ನೀಡಿತು.

ವಿಜಯನಗರ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಕಂಪ್ಲಿ ಹಾಗೂ ಹೂವಿನ ಹಡಗಲಿ ಕ್ಷೇತ್ರಗಳನ್ನು ಒಳಗೊಂಡು ವಿಜಯನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕೆಂದು ನಿಯೋಗ ಸಿಎಂಗೆ ಮನವಿ ಮಾಡಿದೆ.

ಅನೇಕ ತಾಲ್ಲೂಕುಗಳು ಜಿಲ್ಲಾ ಕೇಂದ್ರದಿಂದ ದೂರವಿರುವ ಹಿನ್ನೆಲೆಯಲ್ಲಿ ಜನರ ದೈನಂದಿನ ವ್ಯವಹಾರಗಳು, ಕೆಲಸ ಕಾರ್ಯಗಳಿಗೆ ಹೋಗಿ ಬರಲು ಕಷ್ಟವಾಗುತ್ತದೆ.ಹೀಗಾಗಿ ವಿಜಯನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿದರೆ ಈ ಐದು ತಾಲ್ಲೂಕುಗಳಿಗೆ ಅನುಕೂಲವಾಗಲಿದೆ ಎಂದು ನಿಯೋಗದ ಸದಸ್ಯರು ಮನವಿ ಮಾಡಿದರು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಯಡಿಯೂರಪ್ಪ, ಆದಷ್ಟು ಶೀಘ್ರವಾಗಿ ವಿಜಯನಗರವನ್ನು ಜಿಲ್ಲಾಕೇಂದ್ರವನ್ನಾಗಿ ಘೋಷಣೆ ಮಾಡುವ ಭರವಸೆ ಕೊಟ್ಟಿದ್ದಾರೆ.

ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮತನಾಡಿದ ಉಜ್ಜೈನಿ ಪೀಠದ ಜಗದ್ಗುರು ಶ್ರೀ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿ, ವಿಯನಗರವನ್ನು ಜಿಲ್ಲೆಯನ್ನಾಗಿ ಮಾಡಬೇಕು ಎಂಬುದು ಈ ಭಾಗದ ಜನತೆಯ ಬಹುದಿನಗಳ ಬೇಡಿಕೆಯಾಗಿದೆ. ನಮ್ಮ ಮನವಿಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದಷ್ಟು ಶೀಘ್ರ ಘೋಷಣೆ ಮಾಡುವ ಭರವಸೆ ಕೊಟ್ಟಿರುವುದು ಸಂತಸ ತಂದಿದೆ ಎಂದರು.

ವಿಜಯನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುವುದರಿಂದ ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಕಂಪ್ಲಿ ಹಾಗೂ ಹೂವಿನ ಹಡಗಲಿ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಕೆಲವು ಗ್ರಾಮಗಳು ಜಿಲ್ಲಾ ಕೇಂದ್ರದಿಂದ 200 ಕಿ.ಮೀ. ದೂರದಲ್ಲಿವೆ. ಇದರಿಂದ ಜನರು ಕೆಲಸ ಕಾರ್ಯ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ವಿಜಯನಗರವನ್ನು ಜಿಲ್ಲಾ ಕೇಂದ್ರ ಮಾಡುವುದಾಗಿ ಯಡಿಯೂರಪ್ಪನವರು ನಮಗೆ ಭರವಸೆ ಕೊಟ್ಟಿದ್ದಾರೆ. ಬಳ್ಳಾರಿ ಅತಿ ದೊಡ್ಡ ಜಿಲ್ಲೆಯಾಗಿದ್ದು, 11 ತಾಲ್ಲೂಕುಗಳಿವೆ. ಈ ಹಿಂದೆ ಬೇರೆ ಬೇರೆ ಜಿಲ್ಲೆಗಳನ್ನು ವಿಭಾಗಿಸಿ ಹೊಸ ಜಿಲ್ಲಾ ಕೇಂದ್ರಗಳನ್ನು ಘೋಷಣೆ ಮಾಡಲಾಗಿದೆ. ಇದೇ ಮಾದರಿಯಲ್ಲಿ ವಿಜಯನಗರವನ್ನು ಜಿಲ್ಲೆಯನ್ನಾಗಿ ಮಾಡಬೇಕೆಂದು ಮನವಿ ಮಾಡಿದ್ದೇವೆ. ಆದಷ್ಟು ಶೀಘ್ರ ನಮಗೆ ಸರ್ಕಾರದಿಂದ ಉತ್ತಮ ನಿರ್ಧಾರ ತೆಗೆದುಕೊಳ್ಳುವ ಭರವಸೆ ಸಿಕ್ಕಿದೆ ಎಂದು ತಿಳಿಸಿದರು.

ವಿಜಯನಗರವು ಭೌಗೋಳಿಕ ಹಾಗೂ ಐತಿಹಾಸಿಕವಾಗಿ ಕರ್ನಾಟಕದಲ್ಲಿ ಬಹುದೊಡ್ಡ ಇತಿಹಾಸ ಹೊಂದಿದೆ. ವಿಜಯನಗರ ಸಾಮ್ರಾಜ್ಯ ಅನೇಕ ರಾಜ ಮನೆತನಗಳಿಗೆ ಪ್ರೇರೇಪಣೆಯಾಗಿದೆ. ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೇಂಪೇಗೌಡರು, ಮೈಸೂರಿನ ಯದು ವಂಶಸ್ಥರು ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದರು.

ವಿಜಯನಗರದಲ್ಲಿ ಕೆಂಪೇಗೌಡರು 12 ವರ್ಷ ಶಿಕ್ಷಣ ಕಲಿತಿದ್ದರು. ಇದರಿಂದ ಪ್ರೇರೇಪಣೆಗೊಂಡು ವಿಶ್ವವನ್ನು ಮೆಚ್ಚುವಂತಹ ಬೆಂಗಳೂರು ನಗರವನ್ನು ನಿರ್ಮಾಣ ಮಾಡಿದರು. ಅದೇ ರೀತಿ ವಿಜಯನಗರ ಸಾಮ್ರಾಜ್ಯದ ನವರಾತ್ರಿಯನ್ನು ಮಾದರಿಯಾಗಿಟ್ಟುಕೊಂಡು ಮೈಸೂರು ದಸರಾ ಪ್ರಾರಂಭಿಸಲಾಯಿತು.ಇವೆಲ್ಲವೂ ವಿಜಯನಗರ ಸಾಮ್ರಾಜ್ಯದ ಕೊಡುಗೆಗಳು ಎಂದು ವಿಶ್ಲೇಷಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ