ಪೊಲೀಸ್ ಇಲಾಖೆಯ ಸೇವೆ ಅತ್ಯಂತ ಕಠಿಣವಾದುದು-ಗೃಹ ಸಚಿವ ಬಸವರಾಜ್ ಬೊಮ್ಮಾಯಿ

ಬೆಂಗಳೂರು, ಸೆ.18-ಪೊಲೀಸ್ ಇಲಾಖೆಯ ಸೇವೆ ಅತ್ಯಂತ ಕಠಿಣವಾದುದು. ಇಲ್ಲಿ ಬದ್ಧತೆ ಅತ್ಯಗತ್ಯ.ಆಧುನಿಕತೆಗೆ ತಕ್ಕಂತೆ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಪೊಲೀಸರು ಕೆಲಸ ಮಾಡಬೇಕೆಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಲಹೆ ನೀಡಿದರು.

ಪೊಲೀಸ್ ಪ್ರಧಾನ ಕಚೇರಿಯಲ್ಲಿ ಪೊಲೀಸ್ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ವತಿಯಿಂದ ಆಯೋಜಿಸಲಾಗಿದ್ದ ಇಂಜಿನಿಯರ್‍ಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಪೊಲೀಸರೆಂದರೆ ಕೇವಲ ಕಾನೂನು ಮತ್ತು ಸುವ್ಯವಸ್ಥೆ ರಕ್ಷಣೆ ಜವಾಬ್ದಾರಿ ನಿರ್ವಹಣೆಗೆ ಮಾತ್ರ ಸೀಮಿತವಾಗಿಲ್ಲ. ಹಲವಾರು ಕಠಿಣ ಸವಾಲುಗಳನ್ನು ಎದುರಿಸಬೇಕಿದೆ. ಸಮಾಜದ ಸ್ವಾಸ್ಥ್ಯ ರಕ್ಷಣೆ ಮಾಡಬೇಕಿದೆ. ಇದು ಎಲ್ಲಾ ಇಲಾಖೆಗಳಿಗಿಂತಲೂ ಅತ್ಯಂತ ಮಹತ್ವದ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಪೊಲೀಸ್ ವಸತಿ ನಿಗಮ 2017ರಿಂದೀಚೆಗೆ ವಾಣಿಜ್ಯ ಉದ್ದೇಶಗಳನ್ನು ಕೈಗೆತ್ತಿಕೊಳ್ಳುತ್ತಿದ್ದು, ಇತ್ತೀಚೆಗೆ ಲಾಭದಲ್ಲಿ ನಡೆಯುತ್ತಿದೆ. ಸರ್ಕಾರದ ಬಹುತೇಕ ನಿಗಮಗಳು ನಷ್ಟದಲ್ಲಿವೆ. ಆದರೆ ಪೊಲೀಸ್ ವಸತಿ ನಿಗಮ ಸುಮಾರು 13 ಕೋಟಿಗೂ ಹೆಚ್ಚಿನ ಲಾಭಗಳಿಸಿದೆ. ಇದರ ಕಾರ್ಯನಿರ್ವಹಣೆಯಲ್ಲಿ ಇತರೆ ನಿಗಮಗಳಿಗೆ ಮಾದರಿಯಾಗಿದೆ ಎಂದರು.

ಮುಂದಿನ ಮೂರು ವರ್ಷಗಳಲ್ಲಿ ಸುಮಾರು 15 ಸಾವಿರ ಕೋಟಿ ರೂ.ವೆಚ್ಚದ ಯೋಜನೆಗಳನ್ನು ಕೈಗೊಳ್ಳುವ ಉದ್ದೇಶ ಹೊಂದಿದೆ. ಈಗಾಗಲೇ ಹಲವಾರು ಉತ್ತಮ ಕೆಲಸಗಳನ್ನು ಮಾಡಿರುವ ನಿಗಮ ಮುಂದಿನ ದಿನಗಳಲ್ಲೂ ತನ್ನ ಜವಾಬ್ದಾರಿಯನ್ನು ನಿಭಾಯಿಸಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.

ನಿಗಮದಲ್ಲಿ ಹೊಸ ಇಂಜಿನಿಯರ್‍ಗಳ ಹುದ್ದೆಗಳನ್ನು ಸೃಷ್ಟಿಸಬೇಕು. ಕೇಡರ್ ವ್ಯವಸ್ಥೆ ಜಾರಿಗೆ ತರುವ ಅವಶ್ಯಕತೆ ಇದೆ.ಸರ್ಕಾರ ಈ ಎಲ್ಲಾ ಕೆಲಸಗಳಿಗೂ ಅಗತ್ಯ ಸಹಕಾರ ನೀಡಲಿದೆ. ಈಗಾಗಲೇ ಪೊಲೀಸ್ ವಸತಿ ನಿಗಮ ಉತ್ತಮ ಹೆಸರು ಮಾಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಒಳ್ಳೆಯ ಕೆಲಸಗಳನ್ನು ಮಾಡಲಿ ಎಂದು ಹಾರೈಸಿದರು.

ವೃತ್ತಿಯಲ್ಲಿ ನಾನೂ ಕೂಡ ಇಂಜಿನಿಯರ್ ಆಗಿದ್ದು, ಪೊಲೀಸ್ ಇಲಾಖೆಯಲ್ಲಿ ಇಂಜಿನಿಯರ್‍ಗಳನ್ನು ಭೇಟಿ ಮಾಡುತ್ತೇನೆ ಅಂದುಕೊಂಡಿರಲಿಲ್ಲ. ಗೃಹ ಸಚಿವನಾಗಿ ಪೆÇಲೀಸರನ್ನು ಮತ್ತು ಖೈದಿಗಳನ್ನು ಭೇಟಿ ಮಾಡುತ್ತಿದ್ದೆ. ಇದೇ ಮೊದಲ ಬಾರಿಗೆ ಇಂಜಿನಿಯರ್‍ಗಳನ್ನು ಭೇಟಿ ಮಾಡುತ್ತಿರುವುದು ಸಂತಸ ತಂದಿದೆ.

ಸರ್.ಎಂ.ವಿಶ್ವೇಶ್ವರಯ್ಯನವರು ದೇಶ ಕಂಡ ಅತ್ಯಂತ ಮೇಧಾವಿ. ಉತ್ತಮ ಆರ್ಥಿಕ ತಜ್ಞ, ಸಾಮಾಜಿಕ ಚಿಂತಕ, ಅಭಿವೃದ್ಧಿಯ ಹರಿಕಾರರು. ಸ್ಟೀಲ್ ಕಾರ್ಖಾನೆ, ಸಾಬೂನು ಕಾರ್ಖಾನೆ, ಬಲ್ಬ್ ಕಾರ್ಖಾನೆ, ಪ್ರಥಮ ಮಹಿಳಾ ಕಾಲೇಜು, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸೇರಿದಂತೆ ಹಲವಾರು ಸಂಸ್ಥೆಗಳನ್ನು ಸ್ಥಾಪಿಸಿದ ಮುಂಚೂಣಿ ನಾಯಕರು. ಕೆಆರ್‍ಎಸ್‍ನಲ್ಲಿ ಅವರು ಅಳವಡಿಸಿದ್ದ ಗೇಟ್‍ಗಳು 35 ವರ್ಷ ಬಾಳಿಕೆ ಬರುವುದಾಗಿತ್ತು. ಆದರೆ ಅವುಗಳನ್ನು 70 ವರ್ಷಗಳ ಕಾಲ ಬಳಸಿದ್ದೆವು.ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಅವನ್ನು ಬದಲಾವಣೆ ಮಾಡಬೇಕೆಂಬ ಚಿಂತನೆ ನಡೆದಿತ್ತು. ಆದರೆ ಅದಕ್ಕೆ ಬಹಳಷ್ಟು ವಿರೋಧ ಕೇಳಿ ಬಂದಿದ್ದವು. ವಿಶ್ವೇಶ್ವರಯ್ಯ ಮತ್ತು ಮಹಾರಾಜರ ಕಾಲದ ನಿರ್ಮಾಣಗಳಿಗೆ ಕೈ ಇಡಬಾರದು ಎಂದು ನನ್ನನ್ನು ಹೆದರಿಸುತ್ತಿದ್ದರು.ಒಂದು ವೇಳೆ ಗೇಟ್‍ಗಳ ಬದಲಾವಣೆಗೆ ಮುಂದಾದರೆ ನೀರು ಹರಿದು ಹೋಗುತ್ತದೆ. ಉತ್ತರ ಕರ್ನಾಟಕ ಭಾಗದ ನೀವು ದಕ್ಷಿಣ ಕರ್ನಾಟಕ ಭಾಗದ ಅಣೆಕಟ್ಟಿನ ನಿರ್ಮಾಣಕ್ಕೆ ಪ್ರಯತ್ನ ಪಟ್ಟು ನೀರು ಅಪವ್ಯಯವಾದರೆ ರಾಜೀನಾಮೆ ಕೊಡುವ ಪರಿಸ್ಥಿತಿ ಬರುತ್ತದೆ ಎಂದೆಲ್ಲ ಆತಂಕ ಹುಟ್ಟಿಸಲಾಗಿತ್ತು. ಆದರೆ ನಾನು ಅದಕ್ಕೆಲ್ಲ ಹೆದರದೆ ಏಕಾಏಕಿ ನಿರ್ಧಾರ ತೆಗೆದುಕೊಂಡು ಗೇಟ್‍ಗಳನ್ನು ದುರಸ್ತಿಪಡಿಸಿದ್ದೆ. ಈಗ ಅವು ಉತ್ತಮ ಸ್ಥಿತಿಯಲ್ಲಿವೆ ಎಂದು ಹೇಳಿದರು.

ಡಿಜಿಪಿ ನೀಲಮಣಿ ಎನ್.ರಾಜು ಮಾತನಾಡಿ, ಈಗಾಗಲೇ ಪೊಲೀಸ್ ವಸತಿ ನಿಗಮದ ವತಿಯಿಂದ 11 ಸಾವಿರ ಮನೆಗಳನ್ನು ನಿರ್ಮಿಸಿಕೊಡಲಾಗಿದೆ.2020-2020ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದ್ದು, 2020-25ರ ಯೋಜನೆಯನ್ನು ಜಾರಿಗೆ ತರಲು ಚಿಂತನೆ ನಡೆಸಿದೆ ಎಂದರು.

ವಸತಿ ಹಾಗೂ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರಾಘವೇಂದ್ರ ಔರಾದ್ಕರ್ ಅವರು ನಿಗಮದ ಕಾರ್ಯವೈಖರಿಯನ್ನು ವಿವರಿಸಿದರು.
ಆತಂರಿಕ ಭದ್ರತೆ ವಿಭಾಗದ ಡಿಜಿಪಿ ಎ.ಎಂ.ಪ್ರಸಾದ್, ಸಿಐಡಿ ಡಿಜಿಪಿ ಪ್ರವೀಣ್ ಸೂದ್ ಮತ್ತಿತರರು ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ