ಬೆಂಗಳೂರು,ಸೆ.18- ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿರುವುದು ಹೊಸದಲ್ಲ. ಬಹಳಷ್ಟು ಬಾರಿ ಉಂಟಾಗಿತ್ತು. ಒಂದು ಕುಟುಂಬಕ್ಕೆ 10 ಸಾವಿರ ರೂ. ಪರಿಹಾರ ಕೊಟ್ಟ ಇತಿಹಾಸವಿದ್ದರೆ. ಕಾಂಗ್ರೆಸ್ ನಾಯಕರು ಹೇಳಲಿ ಎಂದು ಕಂದಾಯ ಸಚಿವ ಆರ್.ಅಶೋಕ್ ಸವಾಲು ಹಾಕಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಇಷ್ಟು ಪ್ರಮಾಣದ ಪರಿಹಾರ ಕೊಟ್ಟಿದ್ದರೆ ಹೇಳಲಿ. ಮನೆ ಕಳೆದುಕೊಂಡವರಿಗೆ ಮನೆ ನಿರ್ಮಾಣಕ್ಕೆ ಅನುಕೂಲವಾಗುವಂತೆ 1 ಲಕ್ಷ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. 35 ಸಾವಿರ ಕೋಟಿ ರೂ.ನಷ್ಟ ಉಂಟಾಗಿದೆ ಎಂಬುದನ್ನು ಕೇಂದ್ರ ಸರ್ಕಾರಕ್ಕೆ ವರದಿ ನೀಡಲಾಗಿದೆ. ಪರಿಹಾರ ಬಂದೇ ಬರುತ್ತದೆ.ಎನ್ಡಿಆರ್ಎಫ್ನಿಂದ ಪರಿಹಾರ ಬಿಡುಗೆಡಯಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮನೆ ಕಳೆದುಕೊಂಡುವರಿಗೆ ಮನೆ ಕಟ್ಟಿಕೊಳ್ಳಲು 5 ಲಕ್ಷ ನೀಡಿದ ನಿದರ್ಶನವಿದೆಯೇ?ಎದೆ ಮುಟ್ಟಿಕೊಂಡು ಹೇಳಲಿ ಎಂದರು.
ರಾಜಕಾರಣ ಮಾಡುತ್ತಿದ್ದಾರೆ:
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಪ್ರವಾಹದ ವಿಚಾರದಲ್ಲಿ ಕಾಂಗ್ರೆಸ್ನವರು ರಾಜಕೀಯ ಮಾಡುತ್ತಿದ್ದಾರೆ. ನೆರೆ ಹಾವಳಿಗೆ ಸಂಬಂಧಪಟ್ಟಂತೆ ಪರಿಶೀಲನೆ ನಡೆಸಿ ಸಿಎಂಗೆ ಈಗಾಗಲೇ ಸಚಿವರೆಲ್ಲರೂ ವರದಿ ನೀಡಿದ್ದೇವೆ. ರಾಜ್ಯಕ್ಕೆ ನೆರವು ನೀಡುವಂತೆ ಪ್ರಧಾನಿ ಮೋದಿಯವರಿಗೂ ಮನವಿ ಮಾಡಿದ್ದೇವೆ. ಕೇಂದ್ರ ಸರ್ಕಾರ ಅಧ್ಯಯನ ತಂಡ ಕಳುಹಿಸಿ ಕೊಟ್ಟಿದ್ದರು. ಇಷ್ಟೆಲ್ಲ ಕೊಟ್ಟಿದ್ದರೂ ಕಾಂಗ್ರೆಸ್ ರಾಜಕೀಯ ಮಾಡುತ್ತಿದ್ದಾರೆ ಎಂದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನೆರೆ ಹಾವಳಿಯಿಂದ ಸಂಕಷ್ಟಕ್ಕೀಡಾಗಿರುವ ಜನರಿಗೆ ಅಗತ್ಯವಿರುವ ಸಹಾಯವನ್ನು ರಾಜ್ಯ ಸರ್ಕಾರದಿಂದ ಮಾಡಲಾಗಿದೆ ಎಂದರು.
ವಿಜಯನಗರ ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಸಿಎಂಗೆ ಮನವಿ ಕೊಟ್ಟಿರುವ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ ಎಂದು ಇದೇ ಸಂದರ್ಭದಲ್ಲಿ ಶ್ರೀರಾಮುಲು ಹೇಳಿದರು.