ಛಾಯಾಚಿತ್ರ ಪ್ರದರ್ಶನಕ್ಕೆ ಸರ್ಕಾರದಿಂದ ಆರ್ಥಿಕ ನೆರವು-ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ಸೆ.18- ನೆರೆ ಪೀಡಿತ ಜಿಲ್ಲೆಗಳಲ್ಲಿ ಕರ್ನಾಟಕ ಪೋಟೋ ಜರ್ನಲಿಸ್ಟ್ ಅಸೋಸಿಯೇಷನ್ ನಡೆಸಲು ಉದ್ದೇಶಿಸಿರುವ ಛಾಯಾಚಿತ್ರ ಪ್ರದರ್ಶನಕ್ಕೆ ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು ಸೇರಿದಂತೆ ಎಲ್ಲಾ ರೀತಿಯ ಸಹಾಯ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಕರ್ನಾಟಕ ಚಿತ್ರಕಲಾ ಪರಿಷತ್‍ನಲ್ಲಿ ಕರ್ನಾಟಕ ಪೋಟೋ ಜರ್ನಲಿಸ್ಟ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಛಾಯಾಚಿತ್ರ ಪ್ರದರ್ಶನ ಹಾಗೂ ಅಸೋಷಿಯೇನಷ್ ಉದ್ಘಾಟಿಸಿ ಅವರು ಮಾತನಾಡಿದರು.

ನೆರೆ ಪೀಡಿತ ಪ್ರತಿ ಜಿಲ್ಲೆಗಳಲ್ಲೂ ಅಸೋಷಿಯೇಷನ್ ವತಿಯಿಂದ ಛಾಯಾಚಿತ್ರ ಪ್ರದರ್ಶನ ನಡೆಸಲು ತೀರ್ಮಾನಿಸಲಾಗಿದೆ. ಇದಕ್ಕೆ ಸರ್ಕಾರ ಸ್ಪಂದಿಸಬೇಕೆಂದು ಅಸೋಷಿಯೇಷನ್ ಪದಾಧಿಕಾರಿಗಳು ಸಿಎಂ ಬಳಿ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು, ನೀವು ನೆರೆ ಪೀಡಿತ ಜಿಲ್ಲೆಗಳಲ್ಲಿ ಛಾಯಾಚಿತ್ರ ಪ್ರದರ್ಶನ ಹಮ್ಮಿಕೊಂಡರೆ ಸರ್ಕಾರದಿಂದ ಆರ್ಥಿಕ ನೆರವು ಸೇರಿದಂತೆ ಎಲ್ಲಾ ರೀತಿಯ ಸಹಾಯ ಮಾಡುತ್ತೇವೆ. ಇದೊಂದು ಉತ್ತಮ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಛಾಯಾಚಿತ್ರ ಪ್ರದರ್ಶನ ವೀಕ್ಷಿಸಿದ ಯಡಿಯೂರಪ್ಪ, ಛಾಯಾಗ್ರಾಹಕರು ಸೆರೆ ಹಿಡಿದಿರುವ ಅಪರೂಪದ ಚಿತ್ರಗಳು ಪ್ರವಾಹದಿಂದ ಉಂಟಾಗಿರುವ ನೈಜ ಸ್ಥಿತಿಯ ನೂರಾರು ಕಥೆಯನ್ನು ಚಿತ್ರಗಳು ಹೇಳುತ್ತವೆ ಎಂದರು.

ನೂರು ಪದ ಹೇಳುವ ಕಥೆಯನ್ನು ಒಂದು ಚಿತ್ರ ಹೇಳುತ್ತದೆ ಎಂಬ ನಾಣ್ನುಡಿಯಂತೆ ಇಲ್ಲಿರುವ ಒಂದೊಂದು ಚಿತ್ರಗಳು ವಿಭಿನ್ನವಾಗಿವೆ ಎಂದು ತಿಳಿಸಿದರು.
ಮಾತಿನಲ್ಲಿ ಹೇಳಲು ಆಗದಿರುವುದನ್ನು ಚಿತ್ರಗಳು ಹೇಳುತ್ತವೆ. ಇದೊಂದು ಮಾನವೀಯ ಕೆಲಸ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಮ್ಮ ಜೀವವನ್ನು ಪಣಕ್ಕಿಟ್ಟು ಛಾಯಾಗ್ರಾಹಕರು ನೆರೆ ಪೀಡಿತ ಪ್ರದೇಶಗಳಲ್ಲಿ ಚಿತ್ರಗಳನ್ನು ಸೆರೆ ಹಿಡಿದಿರುವುದು ಅತಿವೃಷ್ಟಿಯಿಂದ ಎಷ್ಟು ಭೀಕರ ಪರಿಸ್ಥಿತಿ ಉಂಟಾಗಿದೆ ಎಂಬುದು ಪ್ರತಿಯೊಬ್ಬರಿಗೂ ಮನವರಿಕೆಯಾಗುತ್ತದೆ. ಇಂತಹ ಪ್ರದರ್ಶನಗಳು ಆಗಾಗ್ಗೆ ನಡೆಯಬೇಕು. ಇದರಿಂದ ಜನರಿಗೂ ವಸ್ತು ಸ್ಥಿತಿ ಮನವರಿಕೆಯಾಗುತ್ತದೆ ಎಂದರು.

ಕರ್ನಾಟಕ ಪೋಟೋ ಜರ್ನಲಿಸ್ಟ್ ಅಸೋಸಿಯೇಷನ್ ಹಮ್ಮಿಕೊಂಡಿರುವ ಛಾಯಾಚಿತ್ರ ಪ್ರದರ್ಶನ ಚಿತ್ರಕಲಾ ಪ್ರರಿಷತ್‍ನಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿದೆ.

ಇತ್ತೀಚೆಗೆ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಕರಾವಳಿ, ಮಲೆನಾಡು ಸೇರಿದಂತೆ ಮತ್ತಿತರ ಭಾಗಗಳಲ್ಲಿ ಭೀಕರ ಪ್ರವಾಹದಿಂದ ಉಂಟಾಗಿರುವ ನೈಜ ಚಿತ್ರಣವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.

ಈ ವೇಳೆ ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್, ಚಿತ್ರನಟಿ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯೆ ತಾರಾ ಅನುರಾಧ, ಬೆಂಗಳೂರು ಪ್ರೆಸ್‍ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ ಮತ್ತಿರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ