ಬೆಂಗಳೂರು, ಸೆ.18- ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಮರೋಪಾದಿಯಲ್ಲಿ ಪರಿಹಾರ ಕಾರ್ಯಕೈಗೊಂಡಿದ್ದರೂ ಸಹ ಕಾಂಗ್ರೆಸ್ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂ.ಪಿ.ರೇಣುಕಾಚಾರ್ಯ ಇಂದಿಲ್ಲಿ ವಾಗ್ದಾಳಿ ನಡೆಸಿದರು.
ವಿಕಾಸಸೌಧದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕಾರ ಹಾಗೂ ಕಚೇರಿ ಪೂಜೆ ನೆರವೇರಿಸಿದ ನಂತರ ಮಾತನಾಡಿದ ಅವರು, ಯಾವ ಯಾವ ಭಾಗಗಳಲ್ಲಿ ಭಾರೀ ಮಳೆಯಿಂದ ಅತಿವೃಷ್ಟಿ ಉಂಟಾಗಿದೆಯೋ ಖುದ್ದು ಮುಖ್ಯಮಂತ್ರಿ ಹಾಗೂ ಸಂಪುಟದ ಸಚಿವರು ಭೇಟಿ ನೀಡಿ ಸಂತ್ರಸ್ತರಿಗೆ ಪರ್ಯಾಯ ಕ್ರಮಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಕಾಂಗ್ರೆಸ್ನವರು ಇದರಲ್ಲೂ ಕೂಡ ರಾಜಕಾರಣ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನತೆ ಅವರಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದರು.
ಪ್ರವಾಹ ಉಂಟಾದ ಮರುಕ್ಷಣವೇ ಮುಖ್ಯಮಂತ್ರಿಗಳು ತಮ್ಮ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಕರಾವಳಿ ಸೇರಿದಂತೆ ಎಲ್ಲಾ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಮನೆ ನಿರ್ಮಾಣಕ್ಕೆ ಐದು ಲಕ್ಷ ಪರಿಹಾರ, ಜಾನುವಾರು ಕಳೆದುಕೊಂಡವರಿಗೆ ಆರ್ಥಿಕ ನೆರವು, ಮನೆ ದುರಸ್ತಿಗೆ 50 ಸಾವಿರ ರೂ.ಪರಿಹಾರ ಸೇರಿದಂತೆ ಸಂತ್ರಸ್ತರ ಕಣ್ಣೊರೆಸುವ ಕೆಲಸ ಮಾಡುತ್ತಿದ್ದಾರೆ.ಪ್ರತಿ ಪಕ್ಷವಾಗಿರುವ ಕಾಂಗ್ರೆಸ್ಗೆ ತನ್ನ ಜವಾಬ್ದಾರಿಯೇನೆಂಬುದು ಗೊತ್ತಿದೆಯೇ ಎಂದು ಪ್ರಶ್ನಿಸಿದರು.
ಈಗಿರುವುದು ನಿಜವಾದ ಕಾಂಗ್ರೆಸ್ ಆಗಿದ್ದರೆ ಬಿಜೆಪಿ ವಿರುದ್ಧ ಮಾತನಾಡುತ್ತಿರಲಿಲ್ಲ. ಕೇಂದ್ರದಿಂದ ನಮಗೆ ಎಲ್ಲಾ ರೀತಿಯ ನೆರವು ಸಿಗುವ ವಿಶ್ವಾಸವಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಹಣ ಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ರಾಜ್ಯಕ್ಕೆ ಅಗತ್ಯ ನೆರವು ನೀಡುವ ವಾಗ್ದಾನ ಮಾಡಿದ್ದಾರೆ. ಹಿಂದೆ ರಾಜ್ಯದಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾದಾಗ ಕೇಂದ್ರ ಸರ್ಕಾರ ಯಾವ ರೀತಿ ನಡೆದುಕೊಂಡಿತ್ತು ಎಂಬುದು ಎಲ್ಲರಿಗು ಗೊತ್ತು ಎಂದು ವಾಗ್ದಾಳಿ ನಡೆಸಿದರು.
ಇದು ನಿಜವಾದ ಕಾಂಗ್ರೆಸ್ ಅಲ್ಲವೇ ಅಲ್ಲ. ಇಲ್ಲಿರುವವರು ನಕಲಿ ಕಾಂಗ್ರೆಸಿಗರು.ಎರಡು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದವರು ಅಧಿಕೃತ ವಿರೋಧ ಪಕ್ಷದ ಸ್ಥಾನ ಪಡೆಯುವಷ್ಟು ಸ್ಥಾನಗಳನ್ನು ಗೆಲ್ಲಲಿಲ್ಲ. 2014ರಲ್ಲಿ 44, 2019ರಲ್ಲಿ 52 ಸ್ಥಾನ ಗಳನ್ನು ಗೆದ್ದಿದ್ದೀರಿ. ಈಗ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದು ತಮ್ಮ ಅಸ್ಥಿತ್ವ ಉಳಿಸಿಕೊಳ್ಳುವುದಕ್ಕಾಗಿಯೇ ಹೊರತು ಇದರಲ್ಲಿ ಯಾವುದೇ ಜನಪರ ಕಾಳಜಿ ಇಲ್ಲ ಎಂದು ಟೀಕಿಸಿದರು.
ಇದಕ್ಕೂ ಮುನ್ನ ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ಕೊಠಡಿ ಪ್ರವೇಶಿಸಿದ ರೇಣುಕಾಚಾರ್ಯ ಅವರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ವಿ.ಸೋಮಣ್ಣ, ಸಿ.ಟಿ.ರವಿ, ಸಿ.ಸಿ.ಪಾಟೀಲ್ ಸೇರಿದಂತೆ ಶಾಸಕರು, ಕಾರ್ಯಕರ್ತರು ಕಚೇರಿಗೆ ಆಗಮಿಸಿ ಹೂ ಗುಚ್ಚ ನೀಡಿ ಅಭಿನಂದಿಸಿದರು.