ಸಂಚಾರಿ ನಿಯಮ ಉಲ್ಲಂಘನೆ ದಂಡ ವಿಧಿಸಿರುವುದು ಅವೈಜ್ಞಾನಿಕವಾಗಿದೆ-ವಾಟಾಳ್ ನಾಗರಾಜ್

ಬೆಂಗಳೂರು, ಸೆ.17- ಸಂಚಾರಿ ನಿಯಮ ಉಲ್ಲಂಘನೆ ದಂಡವನ್ನು ಯಾವುದೇ ಕಾರಣಕ್ಕೂ ಹೆಚ್ಚಳ ಮಾಡಬಾರದು. ಪ್ರತಿಭಟನೆ ನಡೆಸುವವರು ವಾರದ ಮುಂಚೆ ನೋಟಿಸ್ ಕೊಡಬೇಕೆಂಬ ಪೊಲೀಸ್ ಕ್ರಮವನ್ನು ಕೂಡಲೇ ವಾಪಸ್ ಪಡೆಯಬೇಕು. ಔರಾದ್ಕರ್ ವರದಿಯನ್ನು ಯಥಾವತ್ತಾಗಿ ತಕ್ಷಣವೇ ಜಾರಿ ಮಾಡುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜಭವನದಲ್ಲಿ ಪ್ರತಿಭಟನೆ ನಡೆಸಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆದರು.

ಕನ್ನಡ ಸೇನೆಯ ಕೆ.ಆರ್.ಕುಮಾರ್, ನಾರಾಯಣಸ್ವಾಮಿ ಸೇರಿದಂತೆ ಹಲವರು ಇಂದು ರಾಜಭವನ ಮುತ್ತಿಗೆ ಹಾಕಲು ಪ್ರಯತ್ನಿಸಿದಾಗ ಪೊಲೀಸರು ವಶಕ್ಕೆ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್ ಅವರು ಸಂಚಾರಿ ನಿಯಮ ಉಲ್ಲಂಘನೆ ದಂಡ ವಿಧಿಸಿರುವುದು ತೀರ ಅವೈಜ್ಞಾನಿಕವಾಗಿದೆ. ಸಾವಿರಾರು ರೂ.ಗಳ ದಂಡ ಕಟ್ಟಲು ಅಮಾಯಕ ಜನರ ಕೈಯಲ್ಲಿ ಸಾಧ್ಯವಿಲ್ಲ. ಕೂಡಲೇ ಇದನ್ನು ವಾಪಸ್ ಪಡೆಯಬೇಕು.ಯಾವುದೇ ಕಾರಣಕ್ಕೂ ದಂಡದ ಮೊತ್ತ ಹೆಚ್ಚಿಸಬಾರದು ಎಂದು ವಾಟಾಳ್ ಆಗ್ರಹಿಸಿದರು.

ಉತ್ತರ ಕರ್ನಾಟಕ ನೆರೆ ಸಂತ್ರಸ್ತರು ಭಾರೀ ತೊಂದರೆ ಅನುಭವಿಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ನೆರೆ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ.

ನಯಾಪೈಸೆ ಪರಿಹಾರ ನೀಡಿಲ್ಲ. ಪರಿಹಾರಕ್ಕಾಗಿ ಅಲ್ಲಿನ ಜನ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದರೂ ಇವರ ಮನ ಕರಗುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬಂದು ನೆರೆ ಸಂತ್ರಸ್ತರ ಪರಿಸ್ಥಿತಿ ಅವಲೋಕನ ನಡೆಸಬೇಕು ಎಂದು ಒತ್ತಾಯಿಸಿದರು.

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಹಿಂದಿ ಹೇರಿಕೆ ಮಾಡಲು ಮುಂದಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಬೇಕು. ಈ ಎಲ್ಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಂದಿನ ದಿನಗಳಲ್ಲಿ ಕರ್ನಾಟಕ ಬಂದ್ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ವಾಟಾಳ್ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ