ಬೆಂಗಳೂರು, ಸೆ,17- ಪ್ರವಾಹ ಸಂತ್ರಸ್ತರು ಪರಿಹಾರ ಸಿಗದೆ ಆಕ್ರೋಶಗೊಂಡಿದ್ದಾರೆ. ಸೂರು, ನೀರಿಗಾಗಿ ಆಗ್ರಹಿಸಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ ಎದುರು ನೆರೆ ಸಂತ್ರಸ್ತರು ರೈತರು ಮತ್ತು ಕನ್ನಡಪರ ಸಂಘಟನೆಗಳೊಂದಿಗೆ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಭೀಕರ ಮಳೆ, ನೆರೆ ಹಾವಳಿಯಿಂದ ನಮ್ಮ ಬದುಕು ಬೀದಿಗೆ ಬಂದು 45 ದಿನಗಳಾಯಿತು. ಯಾರೂ ನಮ್ಮನ್ನು ಕೇಳುವವರಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ತಾತ್ಕಾಲಿಕ 10 ಸಾವಿರ ರೂ. ಪರಿಹಾರ ಕೊಡುವುದಾಗಿ ಸರ್ಕಾರ ಹೇಳಿತ್ತಾದರೂ ನೈಜ ಫಲಾನುಭವಿಗಳಿಗೆ ಅವು ತಲುಪಿಲ್ಲ.
ಲಕ್ಷಾಂತರ ಜನ ನಿರಾಶ್ರಿತರಾಗಿದ್ದೇವೆ. ನಮಗೆ ಪುನರ್ವಸತಿ ಕಲ್ಪಿಸಬೇಕು. ನಮ್ಮ ಬೇಡಿಕೆಗಳು ಈಡೇರುವವರೆಗೆ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.ಅಲ್ಲದೇ ಸ್ಥಳಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಬರಬೇಕೆಂದು ಪಟ್ಟು ಹಿಡಿದರು.
ನೆರೆ ಸಂತ್ರಸ್ತರನ್ನು ಸರ್ಕಾರಗಳು ನಿರ್ಲಕ್ಷ್ಯ ಮಾಡುತ್ತಿವೆ. ಪರಿಹಾರಕ್ಕಾಗಿ ಒಂದು ಬಿಡಿಗಾಸೂ ಬಂದಿಲ್ಲ. ಪರಿಹಾರ ವಿತರಣೆಯಲ್ಲೂ ತಾರತಮ್ಯ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಪ್ರತಿಭಟನಾ ನಿರತ ರೈತ ಮುಖಂಡ ಚೆನ್ನಪ್ಪ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್, ಆತಂಕ ಬೇಡ. ನಿಮ್ಮ ಸಮಸ್ಯೆಗಳನ್ನು ಪರಿಹರಿಸುತ್ತೇವೆ. ನಿಮ್ಮೊಂದಿಗೆ ನಾವಿದ್ದೇವೆ. ಎರಡು ದಿನದಲ್ಲಿ ಬೆಳಗಾವಿಗೆ ಬಂದು ಖುದ್ದು ಸಂತ್ರಸ್ತರನ್ನು ಭೇಟಿಯಾಗಿ ಸಮಸ್ಯೆಯನ್ನು ಆಲಿಸುವೆ. ಈಗಾಗಲೇ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿಯವರಿಗೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದರು ಹೇಳಿದರು.
ಕೇಂದ್ರ ಸರ್ಕಾರ ಶೀಘ್ರವಾಗಿ ಪರಿಹಾರ ಬಿಡುಗಡೆ ಮಾಡಲಿದೆ ಎಂದರು.