
ಬೆಂಗಳೂರು, ಸೆ.17-ಕೋಮುವಾದ ಹಾಗೂ ಪ್ರಚೋದನಾಕಾರಿ ಭಾಷಣ ಮಾಡಿರುವ ಸಚಿವ ಕೆ.ಎಸ್.ಈಶ್ವರಪ್ಪ ಅವರ ನುಡಿಗಳು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗಲಿದ್ದು, ಈ ಸಂಬಂಧ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬೆಂಗಳೂರು ದಕ್ಷಿಣ ಜಿಲ್ಲಾ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದೆ.
ನಗರದ ಪುರಭವನದಲ್ಲಿ ಶ್ರೀರಾಮಸೇನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೋಹತ್ಯೆ ವಿಷಯ ಪ್ರಸ್ತಾಪಿಸಿ ದೇಶಭಕ್ತ ಮುಸ್ಲಿಮರು ಬಿಜೆಪಿಗೆ ಮತ ನೀಡುತ್ತಾರೆ.
ಪಾಕಿಸ್ತಾನಕ್ಕೆ ಬೆಂಬಲಿಸುವವರು ಮತದಾನ ಮಾಡುವುದಿಲ್ಲ. ಮುಸ್ಲಿಮರ ಮತ ಪಡೆದು ಗೆಲುವು ಸಾಧಿಸುವ ಶಾಸಕರು ಹಿಜಿಡಾಗಳು ಎಂದು ಅವಮಾನಿಸಿ, ಮಾಡಿರುವ ಪ್ರಚೋದನಾಕಾರಿ ಭಾಷಣದಿಂದ ರಾಜ್ಯದಲ್ಲಿ ಹಿಂದೂ-ಮುಸ್ಲಿಮರ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ ಎಂದು ಸಮಿತಿ ಅಧ್ಯಕ್ಷ ಎ.ಆನಂದ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇವರ ಹೇಳಿಕೆ ಕೋಮುವಾದ ಕೆರಳಿಸುವ ಹೇಳಿಕೆಯಾಗಿದ್ದು, ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ವಿನಂತಿಸಿದ್ದಾರೆ.