ಬೆಂಗಳೂರು, ಸೆ.17-ಗಣಿಗಾರಿಕೆ ಮೇಲಿನ ನಿರ್ಬಂಧದಿಂದಾಗಿ ಸಂಕಷ್ಟ ಎದುರಿಸುತ್ತಿರುವ ಲಕ್ಷಾಂತರ ಕಾರ್ಮಿಕ ಕುಟುಂಬಗಳಿಗೆ ಜಿಲ್ಲಾ ಮಟ್ಟದಲ್ಲಿ ಬಳಕೆಯಾಗದೆ ಉಳಿದ ಗಣಿ ತುರ್ತು ನಿಧಿಯ ಹಣದಲ್ಲಿ ಸ್ವಲ್ಪ ಭಾಗವನ್ನು ಕೂಡಲೇ ಬಿಡುಗಡೆ ಮಾಡಲು ಕ್ರಮಕೈಗೊಂಡು ತಮ್ಮ ನೆರವಿಗೆ ಬರುವಂತೆ ಕರ್ನಾಟಕ ಗಣಿ ಅವಲಂಬಿತರ ವೇದಿಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.
ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿರುವ ವೇದಿಕೆ ಪದಾಧಿಕಾರಿಗಳು ಈ ಕೂಡಲೇ ಮಧ್ಯಪ್ರವೇಶಿಸಿ ರಾಜ್ಯದಲ್ಲಿನ ಗಣಿಗಾರಿಕೆ ಸಮಸ್ಯೆ ಪರಿಹರಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆ ವಕ್ತಾರ ಎಸ್.ರಾಜ್ಕುಮಾರ್, ರಾಜ್ಯದ ಗಣಿಗಾರಿಕೆ ಕ್ಷೇತ್ರ ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. ಆದರೆ, ಇದರಿಂದ ಗಣಿಗಾರಿಕೆ ಮೇಲೆ ಅವಲಂಬಿತವಾಗಿರುವ ಕುಟುಂಬಗಳು ನಲುಗುವಂತಾಗಿದೆ. ಗಣಿಗಾರಿಕೆ ಮೇಲಿನ ನಿರ್ಬಂಧ ಮತ್ತು ನಿಬಂಧನೆಗಳಿಗೆ ನಿಜವಾಗಿಯೂ ಬಲಿಯಾಗುತ್ತಿರುವುದು ಇಂತಹ ಕುಟುಂಬಗಳು ಎಂದು ವಿವರಿಸಿದರು.
ಗಣಿಗಾರಿಕೆ ಮೇಲೆ ನಿರ್ಬಂಧ ಹೇರಿರುವುದರಿಂದ ರಾಜ್ಯದ 10 ಲಕ್ಷಕ್ಕೂ ಅಧಿಕ ಗಣಿ ಅವಲಂಬಿತರ ಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಇವರ ಜೀವನ ಸರಿಪಡಿಸಲು ರಾಜ್ಯದ ಗಣಿ ಉದ್ಯಮದಲ್ಲಿನ ಸಂಕಷ್ಟಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದರು.
ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯದಲ್ಲಿ ಗಣಿಗಾರಿಕೆ ನಡೆಯುವ ಜಿಲ್ಲೆಗಳಲ್ಲಿನ ಸ್ಥಳೀಯ ಪ್ರದೇಶ ಮತ್ತು ಜನರ ಸಾಮಾಜಿಕ, ಆರ್ಥಿಕ ಬೆಳವಣಿಗೆಗೆ ಅನುಕೂಲ ಕಲ್ಪಿಸಲು ಎಸ್ಪಿವಿಯನ್ನು ಆರಂಭಿಸಲಾಗಿದೆ. ಗಣಿ ಕಂಪೆನಿಗಳು ಈ ಎಸ್ಪಿವಿಗೆ ಕಬ್ಬಿಣದ ಅದಿರಿನಿಂದ ಬರುವ ಆದಾಯದಲ್ಲಿ ಶೇ.10ರಷ್ಟನ್ನು ಪಾವತಿಸಿವೆ. ಹೀಗೆ ಸಂಗ್ರಹಿಸಲಾದ ಒಟ್ಟು 12 ಸಾವಿರ ಕೋಟಿ ರೂ.ಗಳಿದ್ದು, ಇದನ್ನು ಗಣಿ ಅವಲಂಬಿತರ ಶ್ರೇಯೋಭಿವೃದ್ಧಿಗೆ ಬಳಸುವಂತೆ ಕೋರಿದರು.
ಇತರೆ ರಾಜ್ಯಗಳಲ್ಲಿ ಜಾರಿಯಲ್ಲಿರುವ ನಿಯಮಗಳನ್ನು ನಮ್ಮ ರಾಜ್ಯದಲ್ಲೂ ಅಳವಡಿಸಿ ಗಣಿಗಾರಿಕೆಗೆ ಅವಕಾಶ ನೀಡಬೇಕು. ಸಂಕಷ್ಟಕ್ಕೆ ಸಿಲುಕಿರುವ ಗಣಿ ಅವಲಂಬಿತರ ಕುಟುಂಬಗಳಿಗೆ ಭದ್ರತೆ ಒದಗಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.