ಬೆಂಗಳೂರು,ಸೆ.17-ವಿಶ್ವ ಬಿದಿರು ದಿನದ ಅಂಗವಾಗಿ ರೈತರ ಜಮೀನಿನ ಎರಡೂವರೆ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿದಿರು ಬೆಳೆಯಲು ತೀರ್ಮಾನಿಸಲಾಗಿದ್ದು, ಪ್ರತಿ ಹೆಕ್ಟೇರ್ಗೆ 50 ಸಾವಿರ ಸಹಾಯಧನ(ಸಬ್ಸಿಡಿ)ವನ್ನು ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ನಗರದ ಎಚ್.ಎಸ್.ಆರ್.ಬಡಾವಣೆಯ ಅಗರಕೆರೆ ಆವರಣದಲ್ಲಿ ಅರಣ್ಯ ವನ್ಯಜೀವಿ ಹಾಗೂ ಪರಿಸರದ ಆಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವೃಕ್ಷೋತ್ಸವ-2019 ಚಾಲನೆ ನೀಡಿ ಅವರು ಮಾತನಾಡಿದರು.
ಕರ್ನಾಟಕದಲ್ಲಿ ವೃಕ್ಷ ಹೊದಿಕೆ 1100 ಚ.ಕಿ.ಮೀ ಹೆಚ್ಚಳವಾಗಿರುವುದು ಸಂತಸವಾಗಿದೆ. ಕೇಂದ್ರ ಸರ್ಕಾರವು ಕಾಂಪಾ ಯೋಜನೆಯಡಿ 1350 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿರುವುದರಿಂದ ಪರಿಸರಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಪೂಜ್ಯ ಜಗದ್ಗುರು ಜಗ್ಗೀ ವಾಸುದೇವ್ ಅವರ ನೇತೃತ್ವದಲ್ಲಿ ಕಾವೇರಿ ಕೂಗು ಆಂದೋಲನ ರಾಜ್ಯಾದ್ಯಂತ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿರುತ್ತದೆ. ಅರಣ್ಯ ಇಲಾಖೆಯಿಂದ ಈ ಆಂದೋಲನಕ್ಕೆ ಎರಡು ಕೋಟಿ ಸಸಿಗಳನ್ನು ಮುಂಬರುವ ಮಳೆಗಾಲದ ವೇಳೆ ಕಾವೇರಿ ನದಿಪಾತ್ರದಲ್ಲಿ ನೆಡಲು ಸರ್ಕಾರ ಎಲ್ಲ ರೀತಿಯ ಸಹಕಾರ ಮತ್ತು ನೆರವು ನೀಡಲಿದೆ ಎಂದು ವಾಗ್ದಾನ ಮಾಡಿದರು.
ಪರಿಸರಕ್ಕೆ ಏಕಬಳಕೆಯ ಪ್ಲಾಸ್ಟಿಕ್ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಈ ದಿಸೆಯಲ್ಲಿ ಕರ್ನಾಟಕವು ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು ಸಾಕಷ್ಟು ಪರ್ಯಾಯ ಕ್ರಮಗಳನ್ನು ಕೈಗೊಂಡಿದೆ.
ಪ್ಲಾಸ್ಟಿಕ್ ಬಳಕೆ ನಿಷೇಧವನ್ನು ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವುದು ಹಾಗೂ ಪರ್ಯಾಯ ಕ್ರಮಗಳನ್ನು ತರಲು ನಮ್ಮ ಸರ್ಕಾರ ಕಂಕಣಬದ್ಧವಾಗಿದೆ ಎಂದು ತಿಳಿಸಿದರು.
ವೃಕ್ಷೋದ್ಯಾನಗಳನ್ನು ರಾಜ್ಯದೆಲ್ಲೆಡೆ ಪರಿಸರ ಸಮತೋಲನ ಕಾಪಾಡುವುದು, ವಾಯುಮಾಲಿನ್ಯ ನಿಯಂತ್ರಣವನ್ನು ಸಾಧ್ಯವಾದಷ್ಟು ತಡೆಗಟ್ಟಿ ಜೀವ ಸಂಕುಲಗಳನ್ನು ಸಂರಕ್ಷಿಸಿ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಕಾಪಾಡಲು ಸಾರ್ವಜನಿಕರು ಕೈಜೋಡಿಸುವಂತೆ ಮುಖ್ಯಮಂತ್ರಿಗಳು ಮನವಿ ಮಾಡಿದರು.
ಅರಣ್ಯ ಸಂರಕ್ಷಣೆಯಲ್ಲಿ ಜಲರಕ್ಷಣೆ ಅತ್ಯಂತ ಪ್ರಮುಖವಾಗಿದೆ. ನೀರು ಮತ್ತು ಮರಗಳ ನಡುವೆ ಅವಿಭಾಜ್ಯ ಸಂಬಂಧವಿದ್ದು, ಮುಂದಿನ ಪೀಳಿಗೆಗೆ ಇದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯಕರ್ತವ್ಯ ಎಂದು ಯಡಿಯೂರಪ್ಪ ಕರೆ ನೀಡಿದರು.
ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥನಾರಾಯಣ ಮಾತನಾಡಿ, ಅಗರಕೆರೆಯನ್ನು ಸಂರಕ್ಷಣೆ ಮಾಡಲು ತುರ್ತು ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ. ಈ ಕೆರೆಯ ನೀರನ್ನು ಜನರು ಸದ್ಬಳಕೆ ಮಾಡಿಕೊಳ್ಳಲು ಅನುಕೂಲವಾಗುವಂತೆ ಇಸ್ರೇಲ್ ತಂತ್ರಜ್ಞಾನವನ್ನು ಬಳಸಿ ಮರುಬಳಕೆ ಮಾಡಲು ಮುಂದಾಗಿದೆ ಎಂದು ತಿಳಿಸಿದರು.
ಬೆಂಗಳೂರು ಜಲಮಂಡಳಿಯ ಅಧಿಕಾರಿಗಳು ನೀರು ಮರುಬಳಕೆಗೆ ಕ್ರಮಗಳನ್ನು ಕೈಗೊಳ್ಳಬೇಕು ಜೊತೆಗೆ ಇಲ್ಲಿ ಪರಿಸರಸ್ನೇಹಿ ವಾತಾವರಣವನ್ನು ನಿರ್ಮಾಣ ಮಾಡಲಾಗುವುದು. ಪ್ರಾಣಿ ಸಂಕುಲಗಳ ಸಂರಕ್ಷಿಸಲು ಹಲವು ಕ್ರಮಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರಿನ ಪ್ರಮುಖ ಕೆರೆಗಳಲ್ಲಿ ಅಗರಕೆರೆಯೂ ಒಂದಾಗಿದೆ.ಮುಂದಿನ ದಿನಗಳಲ್ಲಿ ಕೆರೆ ಒತ್ತುವರಿಯಾಗದಂತೆ ಸುತ್ತಮುತ್ತ ತಡೆಗೋಡೆ, ಬೇಲಿ ಹಾಕುವುದು ಸೇರಿದಂತೆ ಹಲವು ಕ್ರಮಗಳನ್ನು ಬಿಬಿಎಂಪಿ ಸಹಯೋಗದೊಂದಿಗೆ ತೆಗೆದುಕೊಳ್ಳಲಿದ್ದೇವೆ. ಕಡೆಪಕ್ಷ ಉಳಿದಿರುವ ಕೆರೆಗಳನ್ನು ಸಂರಕ್ಷಣೆ ಮಾಡುವುದು, ನಮ್ಮಲ್ಲೆರ ಜವಾಬ್ದಾರಿ. ಇದಕ್ಕೆ ಸಾರ್ವಜನಿಕರು ಕೂಡ ಸಹಕರಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬಿಬಿಎಂಪಿ ಮಹಾಪೌರರಾದ ಗಂಗಾಂಬಿಕೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.