ಬ್ರಿಟಿಷ್ ಪ್ಯಾಲೆಸ್‌ನಿಂದ ಗೋಲ್ಡನ್ ಟಾಯ್ಲೆಟ್ ಕಳುವು, ಬೆಲೆ ತಿಳಿದರೆ ಶಾಕ್ ಆಗ್ತೀರಾ!

ಲಂಡನ್‌: ದೊಡ್ಡ ದೊಡ್ಡ ಕಳ್ಳತನದ ಬಗ್ಗೆ ನೀವು ಕೇಳಿರಬೇಕು. ಆದರೆ ನೀವು ಎಂದಾದರೂ ಶೌಚಾಲಯ ಕಳ್ಳತನ ಆಗಿರುವ ಬಗ್ಗೆ ಕೇಳಿದ್ದೀರಾ! ವಿಚಿತ್ರವಾದರೂ, ಇದು ನಿಜ. ಲಂಡನ್‌ನಲ್ಲಿ ಕಳ್ಳರು ಶೌಚಾಲಯ(ಟಾಯ್ಲೆಟ್) ಕದ್ದಿದ್ದಾರೆ. ಇದನ್ನು ಕೇಳಿದೊಡನೆ ಟಾಯ್ಲೆಟ್ ಕದ್ದು ಏನು ಮಾಡ್ತಾರೆ ಅಂತ ನೀವು ಯೋಚಿಸುತ್ತಿರಬಹುದು. ಆದರೆ ಇದು ಸಾಮಾನ್ಯ ಟಾಯ್ಲೆಟ್ ಅಲ್ಲ.  ಬದಲಿಗೆ ಇದು ವಿಶ್ವದ ಅತ್ಯಂತ ದುಬಾರಿ ಟಾಯ್ಲೆಟ್(ಗೋಲ್ಡನ್ ಟಾಯ್ಲೆಟ್) ಆಗಿದ್ದು, ಇದನ್ನು ಚಿನ್ನದಿಂದ ಮಾಡಲಾಗಿದೆ. ಈ ಚಿನ್ನದ ಶೌಚಾಲಯದ ಬೆಲೆ ಸುಮಾರು 35 ಕೋಟಿ ಎಂದು ಹೇಳಲಾಗುತ್ತಿದೆ. ಈ ಚಿನ್ನದ ಶೌಚಾಲಯವನ್ನು ಇಟಾಲಿಯನ್ ಕಲಾವಿದ ಮೌರಿಜಿಯೊ ಕೆಟಲಾನ್ ತಯಾರಿಸಿದ್ದಾರೆ. ಇದು ಚಿನ್ನದಿಂದ ಮಾಡಲ್ಪಟ್ಟಿದ್ದರೂ ಸಹ, ಎಲ್ಲಾ ಸೌಲಭ್ಯಗಳನ್ನು ಹೊಂದಿದ್ದ ಈ ಟಾಯ್ಲೆಟ್ ಸಾಮಾನ್ಯ ಶೌಚಾಲಯದಂತೆ ಕೆಲಸ ಮಾಡುತ್ತಿತ್ತು.

ಚಿನ್ನದಿಂದ ಮಾಡಿದ ಈ ಶೌಚಾಲಯವನ್ನು ಬ್ಲೆನ್‌ಹೈಮ್ ಅರಮನೆಯಲ್ಲಿ ಪ್ರದರ್ಶನವೊಂದರಲ್ಲಿ ಇರಿಸಲಾಗಿತ್ತು. ಇಂಗ್ಲೆಂಡ್‌ನ ಆಕ್ಸ್‌ಫರ್ಡ್‌ಶೈರ್‌ನ ಬ್ಲೆನ್‌ಹೋಮ್ ಪ್ಯಾಲೇಸ್‌ನಲ್ಲಿರುವ ಸ್ನಾನಗೃಹದಲ್ಲಿ 18 ಕ್ಯಾರೆಟ್ ಚಿನ್ನದ ಶೌಚಾಲಯವನ್ನು ಸ್ಥಾಪಿಸಲಾಗಿತ್ತು, ಅದನ್ನು ಕಳ್ಳರು ಕದ್ದಿದ್ದಾರೆ. ಈ ಶೌಚಾಲಯದ ಹೆಸರು ಅಮೆರಿಕ.

ಈ ಶೌಚಾಲಯವನ್ನು ಸಾರ್ವಜನಿಕರಿಗೆ ಗುರುವಾರ ತೆರೆಯಲಾಯಿತು. ಸೆಪ್ಟೆಂಬರ್ 14 ರಂದು ಮುಂಜಾನೆ 4.50 ಕ್ಕೆ ಕಳ್ಳತನ ನಡೆದಿದೆ ಎಂದು ಬ್ಲೆನ್‌ಹೈಮ್ ಅರಮನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶೌಚಾಲಯ ಕೊಠಡಿಯಿಂದ ನೀರು ಹರಿಯುವ ಸಮಯದಲ್ಲಿ ಶೌಚಾಲಯ ಕಳ್ಳತನವಾಗಿರುವುದು ಪತ್ತೆಯಾಗಿದೆ. ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ 66 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.

ಈ ಚಿನ್ನದ ಶೌಚಾಲಯದ ಹುಡುಕಾಟ ನಡೆಯುತ್ತಿದೆ. ಶೀಘ್ರದಲ್ಲೇ ಅದನ್ನು ಕದ್ದಿರುವವರನ್ನು ಬಂಧಿಸಲಾಗುವುದು ಎಂದು ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ‘ಅಮೇರಿಕಾ’ ಎಂದು ಕರೆಯಲ್ಪಡುವ ಈ ಶೌಚಾಲಯವನ್ನು ಮೊದಲ ಬಾರಿಗೆ 2016 ರಲ್ಲಿ ನ್ಯೂಯಾರ್ಕ್ ನಗರದ ಗಗೆನ್ಹೈಮ್ನಲ್ಲಿ ಪ್ರದರ್ಶಿಸಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ