ಬೆಂಗಳೂರು, ಸೆ.15-ದಕ್ಷಿಣ ಭಾರತದ ಜನರಲ್ಲಿ ಬುದ್ಧಿವಂತಿಕೆ ಹಾಗೂ ಸಾಮಥ್ರ್ಯ ಹೆಚ್ಚಿದೆ. ಆದರೆ ತಮ್ಮ ಸಮಸ್ಯೆಗಳ ಬಗ್ಗೆ ಗಟ್ಟಿ ದನಿಯಲ್ಲಿ ಕೇಳುವ ಅಥವಾ ಮಾತನಾಡುವ ಗುಣ ಕಡಿಮೆ ಇದೆ ಎಂದು ರಾಜ್ಯಪಾಲ ವಜೂಭಾಯಿ ವಾಲಾ ವಿಶ್ಲೇಷಿಸಿದರು.
ಎಫ್ಕೆಸಿಸಿಐನ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ವ್ಯಾಪಾರಿಗಳು ನೈತಿಕ ಮೌಲ್ಯಗಳನ್ನಿಟ್ಟುಕೊಂಡು ವ್ಯವಹಾರ ಮಾಡಬೇಕು. ಅಧಿಕಾರಿಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ತೆರಿಗೆ ವಂಚಿಸುವ ಪ್ರಯತ್ನ ಮಾಡಬಾರದು. ವ್ಯಾಪಾರಿಗಳು ನಷ್ಟ ಹೊಂದಿದರೆ ದೇಶದ ಆರ್ಥಿಕ ಬೆನ್ನೆಲುಬು ಮುರಿದಂತೆ. ಹಾಗಾಗಿ ಸರ್ಕಾರ ಅವರಿಗೆ ಎಲ್ಲಾ ರೀತಿಯ ಸಹಕಾರ ಮತ್ತು ನೆರವು ನೀಡಬೇಕು ಎಂದು ಹೇಳಿದರು.
ಸಾಲ ನಿಗದಿತ ಅವಧಿಗೆ ಪಾವತಿ ಮಾಡದಿದ್ದರೆ, ಉದ್ಯಮಿಗಳಿಗೆ ಹೊಸದಾಗಿ ಸಾಲ ಸಿಗುವುದಿಲ್ಲ. ಎನ್ಸಿಎ ಅವಧಿಯನ್ನು 90 ದಿನಗಳಿಗೆ ನಿಗದಿಪಡಿಸಲಾಗಿದೆ.ಪ್ರಸ್ತುತ ದಿನಗಳಲ್ಲಿ ಅಷ್ಟು ಕಡಿಮೆ ಅವಧಿಯಲ್ಲಿ ಸಾಲದ ಕಂತುಗಳನ್ನು ನಿಭಾಯಿಸುವುದು ಕಷ್ಟವಾಗುತ್ತದೆ. ಹಾಗಾಗಿ ಎನ್ಸಿಎ ಅವಧಿಯನ್ನು ಹೆಚ್ಚಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಕೇಂದ್ರದ ಹಣಕಾಸು ಸಚಿವೆ ನಿರ್ಮಲಾಸೀತಾರಾಮನ್ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.ಎನ್ಸಿಎ ಕಡಿಮೆ ಅವಧಿಯಿಂದ ನಿಮಗೆ ಸಮಸ್ಯೆಯಾಗುತ್ತಿದ್ದರೂ ಅದನ್ನು ಏಕೆ ನೀವು ಪ್ರಶ್ನಿಸುತ್ತಿಲ್ಲ ಎಂದು ಕೇಳಿದರು.
ಯಡಿಯೂರಪ್ಪ ಅವರು ನಿರ್ಮಲಾಸೀತಾರಾಮನ್ ಅವರ ಬಳಿ ಈ ಬಗ್ಗೆ ಮಾತನಾಡಬೇಕು.ವ್ಯಾಪಾರಿಗಳು ರಾಜಕಾರಣಿಗಳಂತೆ ಹೆದರಿ ಮಾತನಾಡಬಾರದು.ನಿಮ್ಮ ಸಮಸ್ಯೆಗಳ ಈಡೇರಿಕೆಗೆ ಗಟ್ಟಿ ಧ್ವನಿಯಲ್ಲಿ ಕೇಳಬೇಕು.ಯಾರ ಮುಲಾಜಿಗೂ ಒಳಗಾಗಿ ಮಾತನಾಡಬೇಡಿ.ಪ್ರಾಮಾಣಿಕವಾಗಿ ವ್ಯಾಪಾರ ಮಾಡಿ, ನಿಯಮಿತವಾಗಿ ತೆರಿಗೆ ಕಟ್ಟಿ, ನಿಮ್ಮ ಬೇಡಿಕೆಗಳನ್ನು ಅಷ್ಟೇ ಗಟ್ಟಿ ದನಿಯಲ್ಲಿ ಕೇಳಿ.ದಕ್ಷಿಣ ಭಾರತದ ಜನರಲ್ಲಿ ಸಾಮಥ್ರ್ಯ, ಬುದ್ಧಿವಂತಿಕೆ ಹೆಚ್ಚಿದೆ. ಸಮಸ್ಯೆಗಳನ್ನು ಈಡೇರಿಸುವ ಗುಣಗಳನ್ನು ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.
ಜಿಎಸ್ಟಿ ಜಾರಿ ನಂತರ ಅಧಿಕಾರಿಗಳಿಗೆ ಅನಧಿಕೃತವಾದ ಹಣ ಸಂಗ್ರಹಣೆಗೆ ಕಷ್ಟವಾಗುತ್ತಿದೆ. ಅದಕ್ಕಾಗಿ ಅವರು ಬೇರೆ ಬೇರೆ ರೀತಿಯಲ್ಲಿ ವ್ಯಾಪಾರಿಗಳಿಗೆ ಕಿರುಕುಳ ನೀಡಲಾರಂಭಿಸಿದ್ದಾರೆ. ವ್ಯಾಪಾರ ವಹಿವಾಟಿನ ಬಿಲ್ಗಳನ್ನು ಕೇಳುವ ನೆಪದಲ್ಲಿ ಹಣಕ್ಕೆ ಬೇಡಿಕೆ ಇಟ್ಟಿರುವ ಪ್ರಕರಣ ನನ್ನ ಗಮನಕ್ಕೂ ಬಂದಿತ್ತು. ಇಂತಹ ವಿಷಯಗಳಲ್ಲಿ ನೀವು ಹೆದರುವ ಅಗತ್ಯವಿಲ್ಲ. ನೇರವಾಗಿ ಮುಖ್ಯಮಂತ್ರಿಗಳ ಬಳಿ ಹೋಗಿ ಸದರಿ ಅಧಿಕಾರಿ ವಿರುದ್ಧ ದೂರು ಕೊಡಿ.ಸರ್ಕಾರ ಕಾನೂನು ಮಾಡುವುದು ಜನರ ಒಳಿತಿಗಾಗಿ. ಅಧಿಕಾರಿಗಳು ಅದನ್ನು ದುರುಪಯೋಗಪಡಿಸಿಕೊಂಡು ಲಾಭ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಡಿ. ಅಧಿಕಾರಿಗಳ ಮಿದುಳಿನಲ್ಲಿರುವ ಕೊಬ್ಬನ್ನು ಕರಗಿಸಿ ಎಂದು ಕರೆ ನೀಡಿದರು.
ವ್ಯಾಪಾರ ಮತ್ತು ತೆರಿಗೆ ವಂಚನೆ ಎರಡರಲ್ಲೂ ಯಾರೇ ತಪ್ಪು ಮಾಡಿದರೂ ಶಿಕ್ಷೆಯಾಗಬೇಕು.ಯಡಿಯೂರಪ್ಪ ಅವರ ಮಗ ತಪ್ಪು ಮಾಡಿರಲಿ ಅಥವಾ ರಾಷ್ಟ್ರಪತಿ ಅವರ ಮಗನೇ ತಪ್ಪು ಮಾಡಿರಲಿ ಮುಲಾಜಿರಬಾರದು ಎಂದು ಪರೋಕ್ಷವಾಗಿ ಇತ್ತೀಚಿನ ಬೆಳವಣಿಗೆಗಳನ್ನು ಉಲ್ಲೇಖಿಸದೆ ರಾಜ್ಯಪಾಲರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಕೇಂದ್ರದ ಮಾಜಿ ಸಚಿವ ಹಾಗೂ ರಾಜ್ಯಸಭಾ ಸದಸ್ಯ ಜಯರಾಮ್ ರಮೇಶ್ ಅವರ ಸುದೀರ್ಘ ಭಾಷಣ ಕೇಳಿದ ಮೇಲೆ ಮನೆಯಲ್ಲಿ ಹೆಂಡತಿ ಮಾತುಗಳನ್ನು ತಾಳ್ಮೆಯಿಂದ ಕೇಳುವ ಸಾಮಥ್ರ್ಯ ವೃದ್ಧಿಯಾಗಿದೆ ಎಂದು ಕಾಲೆಳೆದರು.
ಸರ್.ಎಂ.ವಿಶ್ವೇಶ್ವರಯ್ಯನವರ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಜಯರಾಮ್ ರಮೇಶ್ ಅವರು, ಸುಮಾರು 23 ಪುಟಗಳ ಸುದೀರ್ಘ ಭಾಷಣವನ್ನು ಮಾಡಿದ್ದಲ್ಲದೆ, ತಮ್ಮ ಮಾತಿನುದ್ದಕ್ಕೂ ಜವಾಹರ್ಲಾಲ್ ನೆಹರೂ, ವಿಶ್ವೇಶ್ವರಯ್ಯ ಅವರ ನಡುವಿನ ಬಾಂಧವ್ಯ ಮತ್ತು ಮಾತುಕತೆಗಳನ್ನು ಹೆಚ್ಚಾಗಿ ಪ್ರಸ್ತಾಪಿಸಿದರು.
ಮಾತಿನ ಆರಂಭದಲ್ಲೇ ಜಯರಾಮ್ ರಮೇಶ್ ಅವರು, ನಾನು ಒಂದು ನಿಮಿಷದಲ್ಲಿ ಹಲವು ಭಾಷೆಗಳನ್ನು ಮಾತನಾಡಬಲ್ಲೆ.ಒಂದು ದೇಶ, ಒಂದು ತೆರಿಗೆ ಪದ್ಧತಿಗೆ ನನ್ನ ಒಪ್ಪಿಗೆ ಇದೆ.ಆದರೆ ಒಂದು ದೇಶ, ಒಂದು ಭಾಷೆ, ಒಂದು ಸಂಸ್ಕøತಿ, ಒಂದು ಚುನಾವಣೆ ಎಂಬುದನ್ನು ಒಪ್ಪುವುದಿಲ್ಲ ಎಂದು ಹೇಳಿದರಲ್ಲದೆ, ರಾಜ್ಯಪಾಲ ವಿ.ಆರ್.ವಾಲಾ ಅವರೇ ನನ್ನ ಈ ಮಾತಿಗಾಗಿ ಕ್ಷಮೆ ಇರಲಿ ಎಂದು ರಾಜ್ಯಪಾಲರನ್ನು ಕೆಣಕಿದರು.
ಅದಕ್ಕೆ ರಾಜ್ಯಪಾಲರು ಕೂಡ ಜಯರಾಮ್ ರಮೇಶ್ ಅವರ ಸುದೀರ್ಘ ಭಾಷಣವನ್ನು ಕೆಲವು ಹಾಸ್ಯದ ಮೂಲಕ ಕಾಲೆಳೆದರು.