ಬೆಂಗಳೂರು, ಸೆ.15- ದಿನಕ್ಕೊಂದು ದೇಶ ಸುತ್ತುವ, ಘಳಿಗೆಗೊಂದು ವೇಶ ಬದಲಿಸುವ ಪ್ರಧಾನಿಗೆ ಒಂದು ಘಳಿಗೆ ಬಂದು ನೆರೆ ಸಂತ್ರಸ್ತರ ಗೋಳು ಕೇಳುವ ಕನಿಷ್ಠ ಮಾನವೀಯತೆ ಇಲ್ಲದಿರುವುದು ದುರಂತ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈ ಕುರಿತು ಸರಣಿ ಟ್ವಿಟ್ ಮಾಡಿರುವ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ಅತಿವೃಷ್ಟಿಯಿಂದ 36 ಸಾವಿರ ಕೋಟಿ ನಷ್ಟವಾಗಿದೆ. ಕೇಂದ್ರದಿಂದ ಇದುವರೆಗೆ ನಯಾ ಪೈಸೆಯೂ ಬಂದಿಲ್ಲ. ರಾಜ್ಯದ ಹೇಡಿ ಸರ್ಕಾರಕ್ಕೆ ಕೇಂದ್ರವನ್ನು ಪ್ರಶ್ನಿಸುವ ಧೈರ್ಯವಿಲ್ಲ ಎಂದು ಹರಿಹಾಯ್ದಿದ್ದಾರೆ.
2009ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಪ್ರಧಾನಿಯಾಗಿದ್ದ ಮನಮೋಹನ್‍ಸಿಂಗ್ 1500 ಕೋಟಿ ಪರಿಹಾರ ಕೊಟ್ಟಿದ್ದರು.ಈಗಿನ ಪ್ರಧಾನಿ ಎಲ್ಲಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಅತಿವೃಷ್ಟಿ ಪೀಡಿತ ರೈತರಿಂದ ಸಾಲ ವಸೂಲಿ ಮಾಡಲು ಬ್ಯಾಂಕುಗಳು ನೋಟಿಸ್ ನೀಡುತ್ತಿವೆ. ರಾಜ್ಯ ಸರ್ಕಾರಕ್ಕೆ ಮಾನವೀಯತೆ ಇಲ್ಲ. ಇದ್ದರೆ ಇಂತಹ ಕ್ರೌರ್ಯವನ್ನು ತಕ್ಷಣಕ್ಕೆ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
ನೆರೆ ಹಾವಳಿಯಿಂದ ಆಸ್ತಿ ಕಳೆದುಕೊಂಡು ಹಾವೇರಿ, ಗದಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಐವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇದೇ ರೀತಿ ನೂರಾರು ರೈತರು ಅಸಹಾಯಕ ರೀತಿಯಲ್ಲಿದ್ದಾರೆ. ಕೇಂದ್ರ ಸರ್ಕಾರ ಇದ್ದೂ ಸತ್ತಂತಿದೆ ಎಂದು ಅವರು ಹೇಳಿದ್ದಾರೆ.
ನಮ್ಮ ಪ್ರತಿಭಾವಂತ ವಿಜ್ಞಾನಿಗಳು ಹಗಲಿರುಳು ಶ್ರಮಿಸಿ ನಡೆಸಿದ ಚಂದ್ರಯಾನ-2 ಪ್ರಯೋಗ ಪ್ರಧಾನಿ ನರೇಂದ್ರ ಮೋದಿ ಹಾಜರಾದರೂ ವಿಫಲವಾಯಿತು.
ಪ್ರಧಾನಿಗಳು ಅಷ್ಟೇ ಸಮಯವನ್ನು ಅತಿವೃಷ್ಟಿ ಪ್ರದೇಶಗಳಿಗೆ ಭೇಟಿ ನೀಡಿದ್ದರೆ ಪ್ರಯಾಶ್ಚಿತ ಮಾಡಿಕೊಂಡಂತಾಗುತ್ತಿತ್ತು ಎಂದು ತಿಳಿಸಿದ್ದಾರೆ.
ನಮ್ಮ ಸರ್ಕಾರದ ಅವಧಿಯಲ್ಲಿ ರೈತರು ಆತ್ಮಹತ್ಯೆ ದಾರಿ ಹಿಡಿದಾಗ ಕೃಷಿ ಭಾಗ್ಯ, ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆಗಳ ಮೂಲಕ ನೆರವಾಗಿ ರೈತರ ಆತ್ಮಹತ್ಯೆ ತಡೆದಿದ್ದೆವು ಎಂದಿದ್ದಾರೆ.
ಅತಿವೃಷ್ಟಿ ಪ್ರದೇಶಗಳ ಪರಿಹಾರಕ್ಕೆ ಒತ್ತಾಯಿಸದಂತೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಆದೇಶಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕೇಂದ್ರ ಸರ್ಕಾರ ದಿವಾಳಿಯಾಗಿರುವ ಸೂಚನೆ ಇದು. ಇದು ನಿಜವಾಗಿರದಿದ್ದರೆ ಮೊದಲು ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಶ್ವೇತ ಪತ್ರ ಹೊರಡಿಸಲಿ ಎಂದು ಆಗ್ರಹಿಸಿದ್ದಾರೆ.