ಬೆಂಗಳೂರು, ಸೆ.14- ಎಲ್ಲಾ ಭಾಷೆಗಳಿಗೂ ಸಮಾನ ಗೌರವ ನೀಡುವಂತೆ ಒತ್ತಾಯಿಸಿ ಹಾಗೂ ಈ ಅನ್ಯಾಯ ಸರಿಪಡಿಸಲು 343ರಿಂದ 351ರವರೆಗಿನ ವಿಧಿಯನ್ನು ತಿದ್ದುಪಡಿ ಮಾಡುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ ನಡೆಸಿತು.
ಕೇಂದ್ರದ ಒತ್ತಾಯ ಪೂರಕ ಹಿಂದಿ ಹೇರಿಕೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಇಂದು ನಗರದ ಆನಂದ್ರಾವ್ ವೃತ್ತದ ಬಳಿಯ ಮಹಾತ್ಮಗಾಂಧಿ ಪ್ರತಿಮೆ ಸಮೀಪ ಕರಾಳ ದಿನಾಚರಣೆ ಆಚರಿಸಿತು.
ಭಾರತ ದೇಶ ಭಾಷಾ ವೈವಿಧ್ಯತೆಯಿಂದ ಕೂಡಿರುವ ರಾಷ್ಟ್ರ ಇಲ್ಲಿ ಕೇಂದ್ರ ಸರ್ಕಾರ ಮೊದಲಿನಿಂದಲೂ ಹಿಂದಿಗೆ ಪ್ರಾಧಾನ್ಯತೆ ನೀಡಿ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ ಮಾಡುತ್ತಲೇ ಬಂದಿದೆ. ಇದನ್ನು ಖಂಡಿಸುವುದಾಗಿ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದರು.
ಕೇಂದ್ರ ಸರ್ಕಾರದ ಅಧೀನ ಸಂಸ್ಥೆಗಳಾದ ರೈಲ್ವೆ, ಅಂಚೆ ಕಚೇರಿ, ಬ್ಯಾಂಕ್ ಸೇರಿದಂತೆ ಇನ್ನಿತರ ಇಲಾಖೆಗಳ ಪರೀಕ್ಷೆಗಳನ್ನು ಹಿಂದಿ-ಇಂಗ್ಲಿಷ್ನಲ್ಲಿ ಮಾತ್ರ ನಡೆಸುವ ಮೂಲಕ ಪ್ರಾದೇಶಿಕ ಭಾಷೆಯವರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿದರು.
ಸಂವಿಧಾನದ 8ನೇ ಪರಿಚ್ಛೇದದಲ್ಲಿರುವಂತೆ ಎಲ್ಲಾ ಪ್ರಾದೇಶಿಕ ಭಾಷೆಗಳಿಗೆ ಸಮಾನ ಗೌರವ ಕಲ್ಪಿಸಿ ಕೊಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದರು.