ಬೆಂಗಳೂರು, ಸೆ.14-ರಾಜ್ಯ ಬಿಜೆಪಿ ಸರ್ಕಾರದ ಭವಿಷ್ಯವನ್ನು ನಿರ್ಧರಿಸಲಿರುವ ಉಪಚುನಾವಣೆಯನ್ನು ಕಾಂಗ್ರೆಸ್ ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ಪೂರ್ವಭಾವಿ ಸಭೆಗಳನ್ನು ಆರಂಭಿಸಿದೆ.
ಹದಿನೇಳು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಬೇಕಿದ್ದು, ಇಂದು ಮೊದಲ ಹಂತದಲ್ಲಿ ಚಿಕ್ಕಬಳ್ಳಾಪುರ, ಹಿರೇಕೆರೂರು, ರಾಣೆಬೆನ್ನೂರು, ಹುಣಸೂರು, ಮಸ್ಕಿ ಹಾಗೂ ಕೆ.ಆರ್.ಪೇಟೆ ಕ್ಷೇತ್ರಗಳ ಮುಖಂಡರೊಂದಿಗೆ ಚರ್ಚಿಸಲಾಯಿತು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ , ಕಾರ್ಯಾಧ್ಯಕ್ಷ ಈಶ್ವರ್ಖಂಡ್ರೆ ಸಭೆಯ ನೇತೃತ್ವ ವಹಿಸಿದ್ದರು. ಆಯಾ ಕ್ಷೇತ್ರಗಳ ಜಿಲ್ಲಾ ಮುಖಂಡರು ಕೆಪಿಸಿಸಿ ಕಳುಹಿಸಿದ್ದ ವೀಕ್ಷಕರು ಇಂದಿನ ಸಭೆಯಲ್ಲಿ ಭಾಗವಹಿಸಿದ್ದರು.
ಅಭ್ಯರ್ಥಿಗಳ ಆಯ್ಕೆ, ಚುನಾವಣಾ ಪೂರ್ವತಯಾರಿ ಸೇರಿದಂತೆ ಹಲವಾರು ವಿಷಯಗಳ ಕುರಿತು ಸ್ಥಳೀಯ ನಾಯಕರ ಅಭಿಪ್ರಾಯ ಸಂಗ್ರಹಿಸಲಾಯಿತು.
ಮಂಡ್ಯ, ಮೈಸೂರು, ರಾಯಚೂರು, ಉತ್ತರ ಕನ್ನಡ, ಬೆಳಗಾವಿ ಗ್ರಾಮಾಂತರ, ಚಿಕ್ಕೋಡಿ, ಹಾವೇರಿ, ಬಳ್ಳಾರಿ ಗ್ರಾಮೀಣ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಕಾಂಗ್ರೆಸ್ ಮುಖಂಡರು ಸಭೆಯಲ್ಲಿ ಭಾಗವಹಿಸಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಲ್ಲಿಸಿದರು.
ಕಾಂಗ್ರೆಸ್ ನಾಯಕರು ಸಭೆಗಳನ್ನು ಆಯೋಜಿಸುವ ಸುಳಿವು ಸಿಗುತ್ತಿದ್ದಂತೆ ಅತೃಪ್ತರು ಗಲಿಬಿಲಿಗೊಳಗಾಗಿದ್ದು, ನಿನ್ನೆ ಪ್ರತ್ಯೇಕ ಸಭೆ ನಡೆಸಿದ್ದಾರೆ.ರಾತ್ರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ನಮ್ಮ ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕಾಂಗ್ರೆಸ್ ಸರಣಿ ಸಭೆಗಳನ್ನು ನಡೆಸುತ್ತಿದೆ. ನಮ್ಮ ಪರವಾಗಿ ಬಿಜೆಪಿ ಯಾವುದೇ ಸಭೆಗಳನ್ನು ನಡೆಸುತ್ತಿಲ್ಲ. ಉಪಚುನಾವಣೆ ನಡೆದರೆ ಅದನ್ನು ಎದುರಿಸಲು ನಮಗೆ ಕಷ್ಟವಾಗುತ್ತದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.
ಇಂದು 11 ಕ್ಷೇತ್ರಗಳ ಸಭೆ ನಡೆಸಿರುವ ಕಾಂಗ್ರೆಸ್ ನಾಯಕರು, ನಾಳೆ ಆರು ಕ್ಷೇತ್ರಗಳ ಮುಖಂಡರ ಜೊತೆ ಹಂತ ಹಂತವಾಗಿ ಚರ್ಚೆ ನಡೆಸಲಿದ್ದಾರೆ.
ಸಿದ್ದರಾಮಯ್ಯ ಅವರು ಇಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಅವರೊಂದಿಗೆ ಸಭೆ ನಿಗದಿಯಾಗಿದ್ದರೂ ಕೂಡ ಸರಣಿ ಸಭೆಗಳಲ್ಲಿ ಭಾಗವಹಿಸುವ ಸಲುವಾಗಿ ನಿನ್ನೆ ರಾತ್ರಿ ದೆಹಲಿಯಿಂದ ವಾಪಸ್ಸಾಗಿದ್ದಾರೆ.