ಬೆಂಗಳೂರು, ಸೆ.14- ವರ್ಷಾಂತ್ಯಕ್ಕೆ ಅಧಿಕಾರಾವಧಿ ಮುಗಿಯುತ್ತಿರುವ 63 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಅನುಕೂಲವಾಗುವಂತೆ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳುವಂತೆ ರಾಜ್ಯ ಚುನಾವಣಾ ಆಯೋಗ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟಿದೆ.
ಬೆಂಗಳೂರು ಗ್ರಾಮಾಂತರ, ರಾಮನಗರ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಮೈಸೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ ಹಾಗೂ ಬಳ್ಳಾರಿ ಸೇರಿದಂತೆ ಒಟ್ಟು 63 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ.ಹೀಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಚುನಾವಣಾ ಆಯೋಗ ಜಿಲ್ಲಾಧಿಕಾರಿಗಳಿಗೆ ಪತ್ರ ರವಾನಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ (ನಗರಸಭೆ- ವಾರ್ಡ್ ನಂ.31), ರಾಮನಗರ ಜಿಲ್ಲೆಯ ಕನಕಪುರ (ನಗರಸಭೆ ವಾರ್ಡ್ ನಂ.31), ಮಾಗಡಿ (ಪುರಸಭೆ ವಾರ್ಡ್ ನಂ.23), ದಾವಣಗೆರೆ ಮಹಾನಗರ ಪಾಲಿಕೆ (ವಾರ್ಡ್ ನಂ.45), ಕೋಲಾರ ನಗರಸಭೆ(ವಾರ್ಡ್ ನಂ.35), ಮುಳಬಾಗಿಲು ನಗರಸಭೆ(ವಾರ್ಡ್ ನಂ.31), ಕೆಜಿಎಫ್ ನಗರಸಭೆ(ವಾರ್ಡ್ ನಂ.35), ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ, ಗೌರಿಬಿದನೂರು, ಚಿಂತಾಮಣಿ (ನಗರಸಭೆ-ವಾರ್ಡ್ ನಂ.31), ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಜೋಗ (ಕಾರ್ಗಲ್) ಪಟ್ಟಣ ಪಂಚಾಯ್ತಿ(ವಾರ್ಡ್ ನಂ.11), ಮೈಸೂರು ಜಿಲ್ಲೆಯ ಹುಣಸೂರು (ನಗರಸಭೆ-ವಾರ್ಡ್ ನಂ.31), ಚಿಕ್ಕಮಗಳೂರಿನ ಬೀರೂರು (ಪುರಸಭೆ -ವಾರ್ಡ್ ನಂ.23), ದಕ್ಷಿಣ ಕನ್ನಡ (ಮಹಾನಗರ ಪಾಲಿಕೆ-ವಾರ್ಡ್ ನಂ.60), ಧಾರವಾಡ ಜಿಲ್ಲೆಯ ಕುಂದಗೋಳ (ಪಟ್ಟಣ ಪಂಚಾಯ್ತಿ-ವಾರ್ಡ್ ನಂ.19), ಬಳ್ಳಾರಿಯ ಕಂಪ್ಲಿ (ಪುರಸಭೆ-ವಾರ್ಡ್ ನಂ.23), ಕೂಡ್ಲಿಗಿ (ಪಟ್ಟಣ ಪಂಚಾಯ್ತಿ-ವಾರ್ಡ್ ನಂ.20).
ಈ ಸ್ಥಳೀಯ ಸಂಸ್ಥೆಗಳಿಗೆ ನ್ಯಾಯಾಲಯದ ಆದೇಶದಂತೆ ಚುನಾವಣೆ ನಡೆಸಬೇಕಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಮತದಾರರ ಪಟ್ಟಿಯನ್ನು ಸಿದ್ದ ಪಡಿಸಬೇಕು. ಮಾರ್ಚ್ 26, 2019ರವರೆಗಿನ ವಿಧಾನಸಬಾ ಮತದಾರರ ಪಟ್ಟಿಯನ್ನೇ ಅನುಸರಿಸಬೇಕು.
ಮತದಾರರ ಪಟ್ಟಿಯನ್ನು ತಯಾರಿಸಿದ ಕೂಡಲೇ ಮತದಾರರ ಅಂಕಿ-ಅಂಶಗಳೊಂದಿಗೆ ಮತದಾನ ಕೇಂದ್ರಗಳ ಪಟ್ಟಿಯ ಎರಡು ಪ್ರತಿಗಳನ್ನು ಆಯೋಗಕ್ಕೆ ಸಲ್ಲಿಸಬೇಕೆಂದು ಸೂಚಿಸಲಾಗಿದೆ.ಇನ್ನು ಚುನಾವಣೆ ನಡೆಸಲು ಅಗತ್ಯವಾಗಿರುವ ಸಿಬ್ಬಂದಿ ನೇಮಕಾತಿಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೆ, ಇವಿಎಂಗಳ ಸಂಗ್ರಹಣೆ ಮಾಡಿಟ್ಟುಕೊಳ್ಳುವಂತೆ ಆಯೋಗ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಚುನಾವಣೆ ನಡೆಯುವ ಸ್ಥಳೀಯ ಸಂಸ್ಥೆಗಳಿಗೆ ಚುನಾವಣಾ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಬೇಕು. ಮಹಾನಗರ ಪಾಲಿಕೆಯಲ್ಲಿ ಪ್ರತಿ ಐದು ವಾರ್ಡ್ಗೆ ಉಪ ವಿಭಾಗಾಧಿಕಾರಿ ಅಥವಾ ತತ್ಸಮಾನ ಹುದ್ದೆಯ ಒಬ್ಬ ಅಧಿಕಾರಿಯನ್ನು ರಿಟರ್ನಿಂಗ್ ಅಧಿಕಾರಿಯನ್ನಾಗಿ ನೇಮಕ ಮಾಡಿಕೊಳ್ಳುವುದು, ಪ್ರತಿ ರಿಟರ್ನಿಂಗ್ ಅಧಿಕಾರಿಗೆ ತಹಸೀಲ್ದಾರ್ ಅಥವಾ ತತ್ಸಮಾನ ಹುದ್ದೆಯ ಒಬ್ಬ ಅಧಿಕಾರಿ ಹಾಗೂ ಸಹಾಯಕ ಅಧಿಕಾರಿಯನ್ನು ನೇಮಿಸುವುದು.
ನಗರಸಭೆ ವ್ಯಾಪ್ತಿಯಲ್ಲಿ 6ರಿಂದ 8 ವಾರ್ಡ್ಗೆ ಉಪ ವಿಭಾಗಾಧಿಕಾರಿ ಅಥವಾ ತತ್ಸಮಾನ ಹುದ್ದೆಯ ಅಧಿಕಾರಿ.ಅದೇ ರೀತಿ ಸಹಾಯಕ ರಿಟರ್ನಿಂಗ್ ಅಧಿಕಾರಿ ನೇಮಕ.ಪುರಸಭೆ ವ್ಯಾಪ್ತಿಯ 10 ವಾರ್ಡ್ಗೆ ಒಬ್ಬರಂತೆ ತಹಸೀಲ್ದಾರ್ ಅಥವಾ ತತ್ಸಮಾನ ಹುದ್ದೆಯ ಅಧಿಕಾರಿ ಹಾಗೂ ಸಹಾಯ ರಿಟರ್ನಿಂಗ್ ಅಧಿಕಾರಿ ನೇಮಕ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ 10 ವಾರ್ಡ್ಗೆ ಒಬ್ಬರಂತೆ ತಹಸೀಲ್ದಾರ್ಅಥವಾ ಸಹಾಯಕ ಅಧಿಕಾರಿ ಹಾಗೂ ಶಿರಸ್ತೇದಾರ್ ಅಥವಾ ತತ್ಸಮಾನ ಹುದ್ದೆಯ ಅಧಿಕಾರಿಯನ್ನು ನೇಮಿಸುವಂತೆ ಆಯೋಗ ಸೂಚನೆ ಕೊಟ್ಟಿದೆ.
ಇನ್ನು ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ವೆಚ್ಚದ ವಿವರಗಳನ್ನು ಚುನಾವಣಾಧಿಕಾರಿ ಮೂಲಕ ಆಯೋಗಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕು.ಈ ಸಂಬಂಧ ಅಭ್ಯರ್ಥಿಗಳಿಗೂ ಸೂಕ್ತ ಮಾಹಿತಿ ನೀಡಬೇಕು.
ಚುನಾವಣೆಗೆ ಬೇಕಾದ ಲೇಖನಿ ಸಾಮಗ್ರಿಗಳನ್ನು ಸಂಗ್ರಹಿಸಲು ಕ್ರಮ ವಹಿಸುವುದು ಹಾಗೂ ಚುನಾವಣೆಗೆ ಬೇಕಾದ ಅನುದಾನವನ್ನು ಬಿಡುಗಡೆ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಆಯೋಗದ ಅಧಿಕಾರಿಗಳು ಮನವಿ ಮಾಡಿದ್ದಾರೆ.