ಬೆಂಗಳೂರು: ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಗುರುವಾರ ಬೆಳಗ್ಗೆ ಆಟೋಗೆ ಡಿಕ್ಕಿ ಹೊಡೆದಿದ್ದ ಕಾರು ಚಲಾಯಿಸುತ್ತಿದ್ದ ಮೋಟಾರು ವಾಹನ ಇನ್ಸ್‌ಪೆಕ್ಟರ್ ಮಂಜುನಾಥ(52) ಅವರು ಹೃದಯಾಘಾತದಿಂದ ಶುಕ್ರವಾರ ಸಂಜೆ ನಿಧನರಾದರು.
‘‘ಮಂಜುನಾಥ ಅವರು ಮದ್ಯಪಾನ ಮಾಡಿರಲಿಲ್ಲ. ಆದರೂ, ಕೆಲವು ಮಾಧ್ಯಮಗಳಲ್ಲಿ ಮತ್ತು ಜಾಲತಾಣಗಳಲ್ಲಿ ಅವರ ವಿಡಿಯೋವನ್ನು ಮದ್ಯಪಾನ ಮಾಡಿ ಡಿಕ್ಕಿ ಮಾಡಿದ ಆರ್‌ಟಿಒ ಅಧಿಕಾರಿ ಎಂದು ಶೇರ್ ಮಾಡಲಾಗಿತ್ತು. ಆ ವಿಡಿಯೊ ಮತ್ತು ಪೋಟೋಗಳನ್ನು ಪರಿಚಿತರು, ಮಂಜುನಾಥ ಅವರ ಮೊಬೈಲ್‌ಗೆ ಕಳುಹಿಸಿದ್ದರು.
ಮೊದಲೇ ಅನಾರೋಗ್ಯದಿಂದ ಬಳಲುತ್ತಿದ್ದ ಮಂಜುನಾಥ ವಿಡಿಯೊ ಮತ್ತು ಅದರಲ್ಲಿ ಬರುತ್ತಿದ್ದ ಆರೋಪಗಳಿಂದ ಮತ್ತಷ್ಟು ಆಘಾತಕ್ಕೆ ಒಳಗಾಗಿದ್ದರು. ರಕ್ತದೊತ್ತಡ ಹೆಚ್ಚಾಗಿ
ಆರೋಗ್ಯದಲ್ಲಿ ತೀವ್ರ ಏರುಪೇರಾಗಿತ್ತು. ಅವರನ್ನು ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಕ್ತದೊತ್ತಡ ಮತ್ತು ಶುಗರ್‌ನಲ್ಲಿ ತೀವ್ರ ಏರು ಪೇರಾಗಿ ಐಸಿಯುನಲ್ಲಿದ್ದ ಅವರು, ಶುಕ್ರವಾರ ಸಂಜೆ ಕೊನೆಯುಸಿರೆಳೆದರು,’’ ಎಂದು ಅವರ ಸಹೋದ್ಯೋಗಿ ಹಿರಿಯ ಮೋಟಾರು ವಾಹನ ಇನ್ಸ್‌ಪೆಕ್ಟರ್ ಕೃಷ್ಣಾನಂದ ತಿಳಿಸಿದರು.
ಅನಾರೋಗ್ಯದ ಕಾರಣ ಒಂದು ತಿಂಗಳು ವಿಶ್ರಾಂತಿ ಕೇಳಿದ್ದ ಅವರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಸಾರಿಗೆ ಕಚೇರಿಯಲ್ಲಿ ದಟ್ಟಣೆ ಹೆಚ್ಚಾದ ಕಾರಣ ಕರ್ತವ್ಯಕ್ಕೆ ಮರಳುವಂತೆ ಕೋರಲಾಗಿತ್ತು. ರಜೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಅವರು ಗುರುವಾರ ಕರ್ತವ್ಯಕ್ಕೆ ಬರುತ್ತಿದ್ದರು ಎಂದು ತಿಳಿದುಬಂದಿದೆ. ವೈದ್ಯರ ಸಲಹೆ ಮೇರೆಗೆ ಔಷಧ ತೆಗೆದುಕೊಳ್ಳುತ್ತಿದ್ದರು. ಬೆಳಗ್ಗೆ ಔಷಧ ತೆಗೆದುಕೊಂಡು ಬರುವಾಗ ಮಂಪರು ಉಂಟಾಗಿದೆ. ಈ ವೇಳೆ ಆಕಸ್ಮಿಕವಾಗಿ ಆಟೋಗೆ ಅವರ ಕಾರು ಡಿಕ್ಕಿಯಾಗಿದೆ. ಪೊಲೀಸರ ಪರಿಶೀಲನೆಯಲ್ಲೂ ಅವರು ಮದ್ಯಪಾನ ಮಾಡಿಲ್ಲ ಎಂದು ದೃಢಪಟ್ಟಿದೆ ಎಂದು ಸಹೋದ್ಯೋಗಿಗಳು ತಿಳಿಸಿದರು.